ಚಿತ್ರದುರ್ಗ: ಸಮುದಾಯಗಳ ನಿಖರ ದತ್ತಾಂಶಗಳು ಮತ್ತು ಹಿಂದುಳಿದಿರುವಿಕೆಯನ್ನು ಆಧರಿಸಿ, ಪರಿಶಿಷ್ಟ ಜಾತಿಗಳ ವರ್ಗೀಕರಣ ಆಗಬೇಕು ಎಂಬ ನ್ಯಾ. ನಾಗಮೋಹನ್ ದಾಸ್ ವರದಿ ಹಾಗೂ ಸುಪ್ರೀಕೋರ್ಟ್ ತೀರ್ಪಿನ ಆಶಯಗಳಿಗೆ ಸರ್ಕಾರ ಧಕ್ಕೆ ಉಂಟುಮಾಡಿದೆ ಎಂದು ಮಾದರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಸಮುದಾಯಗಳ ನಿಖರ ದತ್ತಾಂಶಗಳು ಮತ್ತು ಹಿಂದುಳಿದಿರುವಿಕೆಯನ್ನು ಆಧರಿಸಿ, ಪರಿಶಿಷ್ಟ ಜಾತಿಗಳ ವರ್ಗೀಕರಣ ಆಗಬೇಕು ಎಂದು ನಿರ್ದೇಶಿಸಿತ್ತು. ಇದನ್ನು ಆಧರಿಸಿಯೇ ನ್ಯಾ.ನಾಗಮೋಹನ್ ದಾಸ್ ಐದು ಪ್ರವರ್ಗಗಳನ್ನು ರೂಪಿಸಿದ್ದರು. ಆದರೆ ಈಗ ಸರ್ಕಾರ ರೂಪಿಸಿರುವ ಸೂತ್ರದಲ್ಲಿ ಐದರ ಬದಲು ಮೂರು ಪ್ರವರ್ಗಗಳು ಮಾತ್ರ ಇದೆ. ಇದರಿಂದಾಗಿ ನ್ಯಾ. ನಾಗಮೋಹನ್ ದಾಸ್ ವರದಿ ಹಾಗೂ ಸುಪ್ರೀಕೋರ್ಟ್ ತೀರ್ಪಿನ ಆಶಯಗಳಿಗೆ ಸರ್ಕಾರ ಧಕ್ಕೆ ಉಂಟುಮಾಡಿದೆ ಎಂದು ಹೇಳಿದರು.
ಕಳೆದ ಆ. 19ರಂದು ತಡರಾತ್ರಿಯವರೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ 6, 6, 5ರ ಒಳಮೀಸಲಾತಿ ಸೂತ್ರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆ. 20 ರಂದು ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯ ನಿರ್ಧಾರ ವನ್ನು ಹೇಳಿಕೆಯ ರೂಪದಲ್ಲಿ ಎರಡೂ ಸದನಗಳಲ್ಲಿ ಪ್ರಕಟಿಸಿದ್ದಾರೆ. ಆದರೆ ವಿರೋಧ ಪಕ್ಷದವರು ಕೇಳಿದ ಸ್ಪಷ್ಟನೆಗಳಿಗೆ ಮುಖ್ಯಮಂತ್ರಿಗಳಾಗಲಿ, ಅನ್ಯ ಸಚಿವರಾಗಲಿ ಉತ್ತರಿಸಿಲ್ಲ. ಈಗಿನ ಮಾಹಿತಿಗಳ ಪ್ರಕಾರ ಸಚಿವ ಸಂಪುಟದ ನಿರ್ಧಾರದ ಸ್ವರೂಪಗಳು ಇನ್ನೂ ಅಂತಿಮವಾಗಿಲ್ಲ. ಸಚಿವ ಸಂಪುಟದ ನಿರ್ಧಾರಕ್ಕೆ ಸರ್ಕಾರದ ಅಂಕಿತವೂ ಬಿದ್ದಿಲ್ಲ ಎಂದು ತಿಳಿದು ಬಂದಿದ್ದು, ಅಲ್ಲದೆ ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಒಳಮೀಸಲಾತಿಯ ಬಗ್ಗೆ ಒಳ ವಿರೋಧಗಳಿವೆ ಎಂಬುದು ನಮಗೆ ತಿಳಿದ ವಿಚಾರವಾಗಿದ್ದು, ಮುಖ್ಯಮಂತ್ರಿಗಳು ಒಳ ಒತ್ತಡಕ್ಕೆ ಮಣಿದಿದ್ದಾರೆ. ಆದರೂ ಅವರು ಒಳಮೀಸಲಾತಿಯ ಸೂತ್ರಕ್ಕೆ ಸಂಪುಟದ ಸಮ್ಮತಿ ಸಿಗುವಂತೆ ಮಾಡಿದ್ದಾರೆ.
ಮುಖ್ಯಮಂತ್ರಿಗಳು ವಹಿಸಿದ ಮುತುವರ್ಜಿಗೆ ಅಭಿನಂದನೆ ತಿಳಿಸಿದ ಅವರು, ಒಳ ಮೀಸಲಾತಿಯ ಸರ್ಕಾರದ ಸೂತ್ರದಲ್ಲಿನ ಗೊಂದಲಗಳ ಬಗ್ಗೆ ಶ್ರೀ ಮಠ ಮುಖ್ಯಮಂತ್ರಿಗಳ ಸ್ಪಷ್ಟನೆಯನ್ನ ಬಯಸಿದ್ದು, ಕೂಡಲೇ ಸಿದ್ದರಾಮಯ್ಯ ಅವರು ಸ್ವಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ನ್ಯಾ ನಾಗಮೋಹನದಾಸ್ ಮೂಲ ಜಾತಿಗಳನ್ನು ಗುರುತಿಸಿಕೊಳ್ಳದ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಮೂಲದ 4.74 ಲಕ್ಷ ಜನಸಂಖ್ಯೆಯ ಸಮೂಹವನ್ನು ಇ ಪ್ರವರ್ಗ ಎಂದು ಗುರುತಿಸಿತ್ತು. ಸಚಿವ ಸಂಪುಟದ ಸೂತ್ರದಲ್ಲಿ ಇ ಪ್ರವರ್ಗವನ್ನು ತೆಗೆಯಲಾಗಿದೆ. ಇ ಪ್ರವರ್ಗದಲ್ಲಿ ಮೂರು ಜಾತಿಗಳು ಇದ್ದವು. ಆದಿಆಂಧ್ರ-7114 ಜನಸಂಖ್ಯೆ, ಆದಿದ್ರಾವಿಡ-320641, ಆದಿ ಕರ್ನಾಟಕ-147199 ಜನಸಂಖ್ಯೆ ಇದ್ದು, ಮುಖ್ಯಮಂತ್ರಿಗಳ ಸದನದ ಹೇಳಿಕೆಯ ಪ್ರಕಾರ ‘ಇ’ ಪ್ರವರ್ಗದ ಶೇ 1ರ ಮೀಸಲಾತಿಯನ್ನು ‘ಸಿ’ ಪ್ರವರ್ಗಕ್ಕೆ ವರ್ಗಾಯಿಸಿಲಾಗಿದೆ. ಆದರೆ ಜನಸಂಖ್ಯೆಯನ್ನು ಸಮಾನವಾಗಿ ಅಂದರೆ ತಲಾ 2.37 ಲಕ್ಷವನ್ನು ‘ಬಿ’ ಮತ್ತು ‘ಸಿ’ ಪ್ರವರ್ಗಕ್ಕೆ ಹಂಚಲಾಗಿದೆ. ಇದು ಅವೈಜ್ಞಾನಿಕವಾದ ನಿರ್ಧಾರವಾಗಿದ್ದು, ಜಾತಿಗಳನ್ನು ಬಿಟ್ಟು ಕೇವಲ ಜನಸಂಖ್ಯೆಯನ್ನು ಎರಡು ಪವರ್ಗಗಳಿಗೆ ಹಂಚುವುದು ಅವಾಸ್ತವಿಕವಾದದು ಎಂದು ಹೇಳಿರುವ ಸ್ವಾಮೀಜಿ, ಸರ್ಕಾರ ಒತ್ತಡದಿಂದ ಹೊರಬಂದು ಹೆಚ್ಚಿನ ಮುರ್ತುವರ್ಜಿ ವಹಿಸಿ ತಾರ್ಕಿಕ ಅಂತ್ಯ ಸಿಗುವಂತೆ ಮಾಡಲಿ ಎಂದು ಆಗ್ರಹಿಸಿದರು.
ಒಳ ಮೀಸಲಾತಿ ಯಾವ ಜಾತಿಗೂ ಅನ್ಯಾಯ ಮಾಡುವುದಿಲ್ಲ, ಎಲ್ಲಾ 101 ಪರಿಶಿಷ್ಟ ಜಾತಿಗಳಿಗೆ ನ್ಯಾಯ ಸಿಗಬೇಕೆಂಬುದು ಶ್ರೀ ಮಠದ ಆಶಯವಾಗಿದ್ದು, ಅಲೆಮಾರಿ ಸಮುದಾಯಗಳೂ ಸೇರಿದಂತೆ ಎಲ್ಲ ತಬ್ಬಲಿ ಜಾತಿಗಳನ್ನು ಜೊತೆಗೆ ಕೊಂಡೊಯ್ಯಲು ಶ್ರೀ ಮಠ ಬದ್ಧವಾಗಿದೆ. ಅಲ್ಲದೆ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗದಿದ್ದರೆ ಒಳಮೀಸಲಾತಿಯ ಆಶಯ ಪೂರ್ಣವಾಗುವುದಿಲ್ಲ ಎಂಬುದು ಶ್ರೀ ಮಠದ ಸ್ಪಷ್ಟ ಅಭಿಪ್ರಾಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿಮುಖಂಡ ಮೋಹನ್, ಜಿ.ಪಂ. ಮಾಜಿ ಸದಸ್ಯಬಿ.ಪಿ.ಪ್ರಜಾಶ್ಮೂರ್ತಿ, ಹುಲ್ಲೂರು ಕುಮಾರಸ್ವಾಮಿ, ಮಾದಾರಚೆನ್ನಯ್ಯಗುರುಪೀಠದ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಉಪಸ್ಥಿತರಿದ್ದರು.