ಚಿತ್ರದುರ್ಗ : ಚಳ್ಳಕೆರೆ ತಾಲ್ಲೂಕು ನಾಗಗೊಂಡನಹಳ್ಳಿಯಲ್ಲಿ ಶುಕ್ರವಾರ ಶ್ರೀ ಚೆಲುಮೇರುದ್ರ ಸ್ವಾಮಿಯ ರಥೋತ್ಸವವು ಅದ್ಧೂರಿಯಾಗಿ ನೆರವೇರಿತು.
ವೇದಾವತಿ ನದಿ ತೀರಕ್ಕೆ ಹೊಂದಿಕೊಂಡಿರುವ ಈ ಭಾಗದ ಆರಾಧ್ಯದೈವ ಚೆಲುಮೆರುದ್ರ ಮಹಾಸ್ವಾಮಿಗಳವರ ಜಾತ್ರಾ ಮಹೋತ್ಸವವು ಪ್ರತಿವರ್ಷ ನಡೆಯುತ್ತಾ ಬಂದಿದ್ದು, ಈ ಬಾರಿಯ ಜಾತ್ರಾಮಹೋತ್ಸವದಲ್ಲಿ ಮೂರನೇ ದಿನವಾಗಿದ್ದ ನಿನ್ನೆ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನಡೆದ ರಥೋತ್ಸವದಲ್ಲಿ ಚೆಲುಮೆರುದ್ರ ಮಹಾಸ್ವಾಮಿಗಳವರ ಉತ್ಸವ ಮೂರ್ತಿಯನ್ನು ರಥದ ಮೇಲಿಟ್ಟು ಅಲಂಕರಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಮಹಾಸ್ವಾಮಿಗಳು ಗುರುಮಠಕಲ್‌ನ ಶ್ರೀ ಶಾಂತವೀರಗುರು ಮುರುಘರಾಜೇಂದ್ರ ಮಹಾಸ್ವಾಮಿಗಳು, ಸಾದರಹಳ್ಳಿಯ ಶ್ರೀ ಸಿದ್ದಲಿಂಗ ಸ್ವಾಮಿಗಳು, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಉಪಸ್ಥಿತರಿದ್ದು ರಥಕ್ಕೆ ಚಾಲನೆ ನೀಡಿದರು.
ರೈತ ಮುಖಂಡರು, ಜನಪ್ರತಿನಿಧಿಗಳು, ನಾಗಗೊಂಡನಹಳ್ಳಿ, ಹರವಿಗೊಂಡನಹಳ್ಳಿ, ಹಾಲಿಗೊಂಡನಹಳ್ಳಿ, ಜಾಜೂರು. ಚೆನ್ನಮ್ಮನಾಗತಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು.