ಮುಂಬೈ : ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಸಾವಿರಾರು ಜನರ ಹೆಸರುಗಳು ಕಾಣೆಯಾಗಿದ್ದು ಇವಿಎಂ ಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಉದ್ದವ್ ಶಿವಸೇನೆ ಬಣದ ನಾಯಕ ಸಂಜಯ್ ರಾವತ್ ಆರೋಪಿಸಿದ್ದಾರೆ.
ಬೃಹನ್‌ಮುಂಬೈ ಮಹಾನಗರಪಾಲಿಕೆ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಂಬೈನಂತಹ ನಗರದಲ್ಲಿ ನಡೆಯುತ್ತಿರುವ ಮತದಾನದ ಮಾದರಿ ಗಂಭೀರ ವಿಷಯವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ, ಎಂಎನ್‌ಎಸ್, ಕಾಂಗ್ರೆಸ್‌ಗೆ ಮತ ಚಲಾಯಿಸಿದ ಸಾವಿರಾರು ಜನರ ಹೆಸರುಗಳು ಕಾಣೆಯಾಗಿದೆ” ಎಂದರು.
“ಇವಿಎಂ ಯಂತ್ರ ಸರಿಯಾಗಿ ಕೆಲಸ ಮಾಡುವುದಿಲ್ಲ. ಚುನಾವಣಾ ಆಯೋಗ ನಮ್ಮ ಮಾತನ್ನು ಕೇಳಲು ಸಿದ್ಧವಾಗಿಲ್ಲ. ನಿನ್ನೆ ಹಿರಿಯ ಬಿಜೆಪಿ ನಾಯಕರು ಮತ್ತು ಚುನಾವಣಾ ಆಯೋಗದ ಸಿಬ್ಬಂದಿ ನಡುವೆ ಸಭೆ ನಡೆದಿದೆ. ನೀತಿ ಸಂಹಿತೆ ಇನ್ನೂ ಜಾರಿಯಲ್ಲಿರುವಾಗ ಈ ಸಭೆ ಹೇಗೆ ನಡೆದಿದೆ. ಚುನಾವಣೆ ಪೂರ್ಣಗೊಳ್ಳುವ ಮೊದಲೇ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾದವು. ಬಿಜೆಪಿ ಆಗಲೇ ತನ್ನ ವಿಜಯವನ್ನು ಆಚರಿಸಲು ಪ್ರಾರಂಭಿಸಿತು” ಎಂದು ಆಕ್ರೋಶ ವ್ಯಕ್ತಪಡಿಸಿದರು.
































