ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರವು ಗ್ಯಾರಂಟಿಗಳ ಅನುಷ್ಠಾನಕ್ಕೆ ಬಜೆಟ್‍ನಲ್ಲಿ ಮೀಸಲಿಟ್ಟ 52,009 ಕೋಟಿ ರೂ. ಹಣ ಎಲ್ಲಿ ಹೋಗುತ್ತಿದೆ? ಯಾರು ನುಂಗುತ್ತಿದ್ದಾರೆ ಎಂಬುದಕ್ಕೆ ಸರಕಾರ ಉತ್ತರಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಗದಿತ ಸಮಯಕ್ಕೆ ಗ್ಯಾರಂಟಿಗಳು ತಲುಪುತ್ತಿಲ್ಲವೇಕೆ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಮತ್ತು ಸರಕಾರದ ಒಳಗಡೆ ಗ್ಯಾರಂಟಿ ಕೊಡಬೇಕೇ ಬೇಡವೇ ಎಂಬ ವಿಚಾರ ಚರ್ಚೆಯಲ್ಲಿದೆ ಎಂದು ವಿಶ್ಲೇಷಿಸಿದರು.
ಈ ಕಾರಣದಿಂದ ಜನರಿಗೆ ಅನುಮಾನ ಬರುವಂತಾಗಿದೆ ಎಂದರು.ದಲಿತರ ಹಣ 25 ಸಾವಿರ ಕೋಟಿಯನ್ನೂ ನುಂಗಿದ್ದೀರಿ. 52 ಸಾವಿರ ಕೋಟಿಯನ್ನು ಬಜೆಟ್‍ನಲ್ಲಿ ಇಟ್ಟಿದ್ದೀರಿ. 6 ತಿಂಗಳಿನಿಂದ ಅಕ್ಕಿ ಕೊಡುವುದಕ್ಕೂ ತಿಲಾಂಜಲಿ ಹಾಡಿದ್ದಾರೆ. ಮನೆ ಒಡತಿಗೆ ಕೊಡುತ್ತಿದ್ದ 2 ಸಾವಿರ ರೂ. ಬರುತ್ತಿಲ್ಲ. ಯುವನಿಧಿ ಮರೀಚಿಕೆಯಾಗಿದೆ; ಅದು ಯಾರಿಗೂ ಸಿಗುತ್ತಿಲ್ಲ ಎಂದು ಟೀಕಿಸಿದರು.
ಹಣ ಎಲ್ಲಿ ಹೋಗಿದೆ? ಇದು ಸಕಾಲಕ್ಕೆ ಜನರಿಗೆ ಯಾಕೆ ಸಿಗುತ್ತಿಲ್ಲ? ಎಂದು ಪ್ರಶ್ನೆಯನ್ನು ಮುಂದಿಟ್ಟರು.ಇದೆಲ್ಲದರ ನಡುವೆ ಲೂಟಿ ನಡೆಯುತ್ತಿದೆ. ಇತಿಮಿತಿ ನೋಡಿ ಗ್ಯಾರಂಟಿ ಕೊಡಬೇಕಿತ್ತು ಎಂದು ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ. ಶಶಿ ತರೂರ್ ಅವರು ಬಂದು ಅಕ್ಕಿ ಕೊಡುವ ಯೋಜನೆ ಜನರನ್ನು ಸೋಂಬೇರಿ ಮಾಡುತ್ತದೆ ಎಂದಿದ್ದಾರೆ. ನೀವು ಕೊಡುವ ಗ್ಯಾರಂಟಿಗಳಿಗೆ ನಿಮ್ಮ ನಾಯಕರ ಸಹಮತ ಇಲ್ಲ ಎಂದಾದರೆ ನಿಮ್ಮದು ಎಂಥ ಗ್ಯಾರಂಟಿ ಎಂದು ಕೇಳಿದರು. ಗ್ಯಾರಂಟಿಗಳು ನಿಮ್ಮ ಪಕ್ಷದ ಮುಖಂಡರಿಗೆ ಪ್ರಶ್ನೆಯಾಗಿದೆ ಎಂದರು.
ಅಕ್ಕಿ ಖರೀದಿಸಿದರೆ ಅದನ್ನು ಜನರಿಗೆ ಕೊಡಬೇಕು. ತಗೊಳ್ಳದೆ ಇದ್ದಲ್ಲಿ ಜನರಿಗೆ ಏನಾದರೂ ಸಬೂಬು ಹೇಳಬಹುದೆಂಬ ಚಿಂತನೆ ಸರಕಾರದ್ದು ಇದ್ದಂತಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಸರ್ವರ್ ಡೌನ್, ಲಾರಿ ಟಯರ್ ಪಂಕ್ಚರ್ ಎಂಬಂಥ ಸಬೂಬು ಹೇಳುವ ಸ್ಥಿತಿಗೆ ಸರಕಾರ ತಲುಪಿದೆ ಎಂದು ವ್ಯಂಗ್ಯವಾಡಿದರು.