ನವದೆಹಲಿ : ಭಾನುವಾರ ನಡೆದ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವು ಎದುರಿಸುತ್ತಿರುವ ನೈಸರ್ಗಿಕ ವಿಪತ್ತುಗಳ ಬಗ್ಗೆ ದುಃಖ ವ್ಯಕ್ತಪಡಿಸಿದರು. ನಿರಂತರ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಪ್ರವಾಹದ ಭೀಕರ ಪರಿಣಾಮಗಳನ್ನು ಅವರು ವಿವರಿಸುತ್ತಾ, ಈ ನೈಸರ್ಗಿಕ ವಿಕೋಪಗಳು ದೇಶದ ಸಹನೆ ಮತ್ತು ಸಂಯಮದ ಪರೀಕ್ಷೆಯಾಗಿವೆ ಎಂದರು.
125ನೇ ಸಂಚಿಕೆಯ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಕಳೆದ ಕೆಲವು ವಾರಗಳಲ್ಲಿ ಮನೆಗಳು ನಾಶವಾಗಿರುವುದು, ಹೊಲಗಳು ಮುಳುಗಿರುವುದು, ಹಲವು ಕುಟುಂಬಗಳು ಸಂಪೂರ್ಣವಾಗಿ ನಾಶವಾಗಿರುವ ದುರ್ಘಟನೆಗಳನ್ನು ಸ್ಮರಿಸಿದರು. ಸೇತುವೆಗಳು ಹಾಗೂ ರಸ್ತೆಗಳು ಕೊಚ್ಚಿಹೋಗಿದ್ದು, ಜನಜೀವನ ಅಪಾಯದಲ್ಲಿದೆ. ಈ ಎಲ್ಲ ಘಟನೆಗಳು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ನೋವಿನ ಚಿಹ್ನೆಯಾಗಿ ಉಳಿದಿವೆ ಎಂದು ಅವರು ತಿಳಿಸಿದರು.
ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ , ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಸಶಸ್ತ್ರ ಭದ್ರತಾ ಪಡೆಗಳು ಸಮರ್ಪಿತ ಸೇವೆ ಸಲ್ಲಿಸಿದ್ದನ್ನು ಮೋದಿ ಪ್ರಶಂಸಿಸಿದರು. ಎಲ್ಲೆಲ್ಲಿ ಬಿಕ್ಕಟ್ಟು ಉಂಟಾದರೂ, ನಮ್ಮ ರಕ್ಷಣಾ ಸಿಬ್ಬಂದಿ ಹಗಲಿರುಳು ಶ್ರಮಿಸಿ ಜನರ ಜೀವ ಉಳಿಸಲು ತ್ಯಾಗಮಾಡಿದರು. ತಂತ್ರಜ್ಞಾನದ ಸಹಾಯದಿಂದ ಥರ್ಮಲ್ ಕ್ಯಾಮೆರಾ, ಲೈವ್ ಡಿಟೆಕ್ಟರ್ಗಳು, ಸ್ನಿಫರ್ ಡಾಗ್ಗಳು ಮತ್ತು ಡ್ರೋನ್ಗಳ ಮೂಲಕ ಪರಿಹಾರ ಕಾರ್ಯಾಚರಣೆಗಳನ್ನು ವೇಗಗೊಳಿಸಲಾಯಿತು.
ಹೆಲಿಕಾಪ್ಟರ್ಗಳ ಮೂಲಕ ಆಹಾರ ಮತ್ತು ಅಗತ್ಯವಸ್ತುಗಳನ್ನು ತಲುಪಿಸಲಾಗಿದ್ದು, ಗಾಯಾಳುಗಳನ್ನು ವಿಮಾನದ ಮೂಲಕ ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ. ಪ್ರಧಾನಿ ಅವರು ವೈದ್ಯರು, ಸ್ಥಳೀಯ ಆಡಳಿತ, ಸಾಮಾಜಿಕ ಕಾರ್ಯಕರ್ತರು ಮತ್ತು ಸಾಮಾನ್ಯ ನಾಗರಿಕರ ಮಾನವೀಯ ಸಹಕಾರವನ್ನೂ ಶ್ಲಾಘಿಸಿದರು. “ಈ ಕಷ್ಟದ ವೇಳೆಯಲ್ಲೂ ಮಾನವೀಯತೆಯನ್ನು ಆದ್ಯತೆಯಾಗಿ ಪರಿಗಣಿಸಿದ ಪ್ರತಿಯೊಬ್ಬ ನಾಗರಿಕನಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು,” ಎಂದರು.
ಇದಾದ ನಂತರ, ಮೋದಿಜಿ ಭೀಕರ ನೈಸರ್ಗಿಕ ವಿಪತ್ತುಗಳ ನಡುವೆ ಜಮ್ಮು ಮತ್ತು ಕಾಶ್ಮೀರದ ಜನತೆಯ ಶಕ್ತಿದಾಯಕ ಸಂದೇಶಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಪುಲ್ವಾಮಾದಲ್ಲಿ ನಡೆದ ಮೊದಲ ಹಗಲು-ರಾತ್ರಿ ಕ್ರಿಕೆಟ್ ಪಂದ್ಯ ಮತ್ತು ಶ್ರೀನಗರದ ದಾಲ್ ಸರೋವರದಲ್ಲಿ ಆಯೋಜಿಸಲಾದ ಭಾರತದ ಮೊದಲ “ಖೇಲೋ ಇಂಡಿಯಾ ಜಲ ಕ್ರೀಡಾ ಉತ್ಸವ” ಎಂಬ ಎರಡು ಸಾಧನೆಗಳನ್ನು ಅವರು ಪ್ರಸ್ತಾಪಿಸಿದರು.
ಪುಲ್ವಾಮಾದಲ್ಲಿ ನಡೆದ ಈ ಕ್ರಿಕೆಟ್ ಪಂದ್ಯ ‘ರಾಯಲ್ ಪ್ರೀಮಿಯರ್ ಲೀಗ್’ನ ಭಾಗವಾಗಿದ್ದು, ಸ್ಥಳೀಯ ಕ್ರೀಡಾಂಗಣದಲ್ಲಿ ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿದ್ದರು. ಮೊದಲು ಅಸಾಧ್ಯವೆನಿಸಿದ ಈ ಪಂದ್ಯಾವಳಿಯು ಈಗಲಾದರೂ ಸಾಧ್ಯವಾಗಿದೆ ಎಂಬುದೇ “ಭಾರತ ಬದಲಾಗುತ್ತಿದೆ” ಎಂಬ ಘೋಷಣೆಗೆ ಜೀವಂತ ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದರು.
ಪ್ರಾಕೃತಿಕ ವಿಪತ್ತುಗಳು ದೇಶವನ್ನು ತೀವ್ರವಾಗಿ ಆಘಾತಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರದಿಂದ ಬಂದ ಈ ಸಾಧನೆಗಳು ಭವಿಷ್ಯಕ್ಕಾಗಿ ಭರವಸೆಯ ಬೆಳಕು ಹರಡುತ್ತಿವೆ. ಸಂಕಷ್ಟದ ಮಧ್ಯೆ ಭಾರತೀಯರು ತೋರಿಸುತ್ತಿರುವ ಸ್ಪಂದನೆ, ಸಹಕಾರ ಮತ್ತು ಶಕ್ತಿ ದೇಶದ ಆತ್ಮವಿಶ್ವಾಸವನ್ನು ಮತ್ತಷ್ಟು ಉಜ್ವಲಗೊಳಿಸುತ್ತಿವೆ ಎಂಬುದನ್ನು ಪ್ರಧಾನಿ ಮೋದಿ ತಮ್ಮ ಸಂದೇಶದ ಮೂಲಕ ಸ್ಪಷ್ಟಪಡಿಸಿದರು.