ಚಿತ್ರದುರ್ಗ: ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ರವೀಂದ್ರ ಅವರು ನಡೆಸಿರುವ ಅಕ್ರಮಗಳು, ನಕಲಿ ಬಿಲ್ಗಳು ಮತ್ತು ಅಕ್ರಮ ಆಸ್ತಿ ಸಂಪಾದನೆಯ ಕುರಿತು ಕೂಡಲೇ ಸಮಗ್ರ ತನಿಖೆ ನಡೆಸಬೇಕು. ಅವರ ಆಸ್ತಿಗಳನ್ನು ಸರ್ಕಾರ ತಕ್ಷಣವೇ ವಶಪಡಿಸಿಕೊಂಡು, ಸಾರ್ವಜನಿಕ ಹಣ ಹಾಗೂ ಇಷ್ಟು ವರ್ಷಗಳ ಸರ್ಕಾರಿ ಸಂಬಳವನ್ನು ವಸೂಲಿ ಮಾಡಬೇಕು. ಅಲ್ಲದೆ, ಅವರನ್ನು ಕೆಲಸದಿಂದ ವಜಾಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಸಚಿವರು, ಸರ್ಕಾರವನ್ನು ಬಂಜಾರ (ಲಂಬಾಣಿ) ಸಮಾಜ (ರಿ) ಜಿಲ್ಲಾಧ್ಯಕ್ಷರಾದ ಎಂ ಸತೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ರವೀಂದ್ರ ಅವರ ಹೆಸರಿನಲ್ಲಿ ನಡೆದಿದೆ ಎನ್ನಲಾದ ಹಲವು ಅಕ್ರಮಗಳ ಸರಮಾಲೆಯನ್ನು ದಾಖಲೆಗಳ ಸಮೇತ ಬಹಿರಂಗಪಡಿಸಲಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಅವರ ಆಸ್ತಿಗಳನ್ನು ಸರ್ಕಾರ ವಶಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದು, ಡಾ. ರವೀಂದ್ರ ಅವರು ಯಾವುದೇ ರಶೀದಿ ಇಲ್ಲದೆ ಮೂರೂವರೆ ಕೋಟಿ ರೂಪಾಯಿ ಪಾವತಿ ಮಾಡಿಕೊಂಡಿದ್ದು, ಇಂದಿಗೂ ಅದರ ಲೆಕ್ಕ ನೀಡಿಲ್ಲ ಅಮಾನತು ಆಗುವ ಮೊದಲು ಒಂದು ಲಕ್ಷದ ಎಪ್ಪತ್ತೊಂದು ಸಾವಿರದ ಎಪ್ಪತ್ತೈದು ರೂಪಾಯಿ ಹಾಗೂ ಅಮಾನತು ಆದ ನಂತರ ಒಂದು ಲಕ್ಷದ ಎಪ್ಪತ್ತಮೂರು ಸಾವಿರ ರೂಪಾಯಿಗಳ ಬಿಲ್ಗಳನ್ನು ದಾಖಲೆಗಳಿಲ್ಲದೆ ಪಾವತಿ ಮಾಡಿಕೊಳ್ಳಲಾಗಿದೆ ಎಂದು ದೂರಿದರು.
ರವೀಂದ್ರ ಅವರು ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ದಾದಿಯರನ್ನು ತಮ್ಮ ಸ್ವಂತ ಆಸ್ಪತ್ರೆಯ ಕೆಲಸ ಗಳಿಗೆ ಬಳಸಿಕೊಳ್ಳುತ್ತಿದ್ದು, ಅವರಿಗೆ ಸರ್ಕಾರಿ ಸಂಬಳ ನೀಡಲಾಗುತ್ತಿದೆ ಆದರೆ ಕೆಲಸ ಮಾತ್ರ ಖಾಸಗಿ ಆಸ್ಪತ್ರೆ ಯಲ್ಲಿ ಮಾಡಲಾಗುತ್ತಿದೆ, ಜಿಲ್ಲಾ ಶಸ್ತ್ರಚಿಕಿತ್ಸಕರಾಗಿದ್ದುಕೊಂಡು ಸ್ವಂತ ಆಸ್ಪತ್ರೆ ಮಾಡಿಕೊಂಡಿದ್ದಾರೆ. ಸಾರ್ವ ಜನಿಕ ಆಸ್ತಿಗಳ ಕಬಳಿಕೆ, ಅಕ್ರಮ ಒತ್ತುವರಿ, ಸಾರ್ವಜನಿಕ ಹಣದಲ್ಲಿ ಅಕ್ರಮ ಗುತ್ತಿಗೆ (ಟೆಂಡರ್) ಹಾಗೂ ಸರ್ಕಾರದ ಯಾವುದೇ ಬಿಲ್ಗಳು ಬಂದರೂ ಅವು ತಮ್ಮ ಆಸ್ಪತ್ರೆಗೆ ಸೇರುವಂತೆ ನೋಡಿಕೊಳ್ಳಲಾಗುತ್ತಿದೆ. ಸರ್ಕಾರಿ ನೌಕರರಾಗಿದ್ದುಕೊಂಡು ಹೆಂಡತಿ, ಸಂಬಂಧಿಕರು ಮತ್ತು ಮಕ್ಕಳ ಹೆಸರಿನಲ್ಲಿ ಇಷ್ಟು ಆಸ್ತಿ ಮಾಡಿಕೊಳ್ಳುವ ಅಗತ್ಯವಿತ್ತೇ ಎಂದು ಪ್ರಶ್ನಿಸಲಾಗಿದೆ. ಕಾನೂನು ಮತ್ತು ಅಧಿಕಾರದ ದುರುಪಯೋಗ ಮಾಡಿಕೊಂಡು ಉಲ್ಲಂಘನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಒಂದು ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಇಪ್ಪತ್ತೈದು ಸಾವಿರ ರೂಪಾಯಿ ಮೌಲ್ಯದ ವಸ್ತುವನ್ನು ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿಗೆ ಖರೀದಿಸಲಾಗಿದೆ ಗಣಕಯಂತ್ರ ಇನ್ನೊಂದು ವಸ್ತು ಮತ್ತು ರುಬ್ಬುವ ಯಂತ್ರಕ್ಕೆ ಒಂದು ಲಕ್ಷ ರೂಪಾಯಿಗೂ ಹೆಚ್ಚು ಬಿಲ್ ಹಾಕಲಾಗಿದೆ ಒಂದು ಧ್ವನಿವರ್ಧಕಕ್ಕೆ ಹತ್ತು ಸಾವಿರ ರೂಪಾಯಿ ಬಿಲ್ ಹಾಕಲಾಗಿದೆ. ತಮ್ಮ ಅಕ್ರಮಗಳು ಎಲ್ಲಿ ಬಯಲಾಗುತ್ತವೆಯೋ ಎಂಬ ಕಾರಣಕ್ಕೆ ಇನ್ನೊಬ್ಬರ ಮೇಲೆ ತಿರುಗಿಸಿ, ಕಾಣದ ಕೈಗಳ ಮೂಲಕ ಶಾಸಕರು ಮತ್ತು ಸಚಿವರ ಕಡೆಯಿಂದ ಒತ್ತಡ ತರಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್ ಡಿ ಆರ್ ಮಾತನಾಡಿ, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾಗಿರುವ ಡಾ. ರವೀಂದ್ರ ಎಸ್.ಪಿ. ಅವರ ವಿರುದ್ಧ ಕರ್ತವ್ಯಲೋಪ, ಅಕ್ರಮ ಆಸ್ತಿ ಸಂಪಾದನೆ ಮತ್ತು ದುರ್ನಡತೆ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅಗ್ರಹಿಸಿದ್ದು, ಚಿತ್ರದುರ್ಗ ಜಿಲ್ಲಾಧಿಕಾರಿಗಳ ಮೂಲಕ ಲೋಕಾಯುಕ್ತ ಎಸ್.ಪಿ., ಎ.ಡಿ.ಜಿ.ಪಿ. ಅವರಿಗೆ ದಾಖಲೆಗಳ ಸಮೇತ ಮನವಿ ಸಲ್ಲಿಸಿ, ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸಾಕಷ್ಟು ಲೋಪಗಳಿದ್ದು, ಗ್ರಾಮೀಣ ಭಾಗದಿಂದ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಆ ಲೋಪಗಳನ್ನು ಸರಿಪಡಿಸುವ ಬದಲು ಭ್ರಷ್ಟಾಚಾರ, ಕರ್ತವ್ಯಲೋಪ ಹಾಗೂ ಕೆಳಹಂತದ ಅಧಿಕಾರಿಗಳಿಗೆ ಕಿರುಕುಳ ನೀಡುವ ಮೂಲಕ ದರ್ಪ ಮೆರೆಯುತ್ತಿದ್ದಾರೆ ಎಂದು ದೂರಿದರು.
ಸಮಾಜದ ಮುಖಂಡರಾದ ಮಂಜು ನಾಯಕ್, ಚೇತನ್ ಕುಮಾರ್ ನಾಯ್ಕ್, ಹಾಲೇಶ್, ಶಿವಕುಮಾರ್, ಪ್ರಶಾಂತ್ ನಾಯ್ಕ್, ಯಶವಂತ್, ಗುರುರಾಜ್ ಉಪಸ್ಥಿತರಿದ್ದರು.