ಚಿತ್ರದುರ್ಗ: ಕಬೀರಾನಂದಾಶ್ರಮವನ್ನು ಜಾತ್ಯಾತೀತ ಹಾಗೂ ಶ್ರದ್ಧಾ-ಭಕ್ತಿಯ ಧಾರ್ಮಿಕ ಕೇಂದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ಪೂಜ್ಯರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪೂಜ್ಯರು ತಮ್ಮ ಜೀವಿತಾವಧಿಯಲ್ಲಿ ಕೇವಲ ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುವುದರ ಜೊತೆಗೆ, ತಾವೇನು ಸಾಧನೆ ಮಾಡಿದ್ದೇವೆ ಎಂದು ಚಿಂತನೆ ನಡೆಸುವ ವ್ಯಕ್ತಿತ್ವವನ್ನು ಹೊಂದಿದ್ದಾರೆ ಎಂದು ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.
ನಗರದ ಕಬೀರಾನಂದ ನಗರದಲ್ಲಿ ಶ್ರೀ ಸದ್ಗುರು ಕಬೀರಾನಂದಾಶ್ರಮದ ಆವರಣದಲ್ಲಿ ಶ್ರೀ ಕಬೀರಾನಂದ ಸ್ವಾಮಿ ವೇದಿಕೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಪೀಠಾಧಿಪತಿಗಳಾದ ಶ್ರಿ ಶಿವಲಿಂಗಾನಂದ ಶ್ರೀಗಳವರ ವರ್ಧಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಕಬೀರಾನಂದಾಶ್ರಮವು ಹಿಂದೆ ಶಿಥಿಲಾವಸ್ಥೆ ಯಲ್ಲಿತ್ತು ಆದರೆ ಪೂಜ್ಯರ ಕೆಲವೇ ವರ್ಷಗಳ ಆಡಳಿತಾವಧಿಯಲ್ಲಿ ಆಶ್ರಮವು ಮುಗಿಲೆತ್ತರಕ್ಕೆ ಬೆಳೆದು ನಿಂತಿರುವುದು ಅವರ ಪರಿಶ್ರಮದ ಫಲವಾಗಿದೆ.ಈ ಆಶ್ರಮವು ಕೇವಲ ಗೋಶಾಲೆಗೆ ಮಾತ್ರ ಸೀಮಿತವಾ ಗಿರದೆ, ಅನ್ನ, ಆಹಾರ ಹಾಗೂ ವಿದ್ಯಾ ದಾಸೋಹದಂತಹ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ಇಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು ವಿದ್ಯಾ ಹಾಗೂ ಅನ್ನದಾಸೋಹವನ್ನು ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಧ್ಯ ಕರ್ನಾಟಕದ ಒಂದು ಪ್ರಮುಖ ಶ್ರದ್ಧಾ ಕೇಂದ್ರವಾಗಿ ಇದು ಬೆಳೆಯುತ್ತಿದೆ ಎಂದರು.
ಚಿತ್ರದುರ್ಗ ನಗರದಲ್ಲಿ ಅನೇಕ ಜಾತಿಯ ಮಠಮಾನ್ಯಗಳಿದ್ದರೂ, ಕಬೀರಾನಂದಾಶ್ರಮವು ಒಂದು ಜಾತ್ಯಾತೀತ ಮಠವಾಗಿ ಮೂಡಿಬಂದಿದೆ. ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಈ ಮಠವು ಮುನ್ನಡೆ ಯುತ್ತಿದ್ದು, ಎಲ್ಲರೂ ಒಗ್ಗಟ್ಟಾಗಿ ಕೈಜೋಡಿಸಿ ಸಾಗಬೇಕಿದೆ. ಬಸವಾದಿ ಪ್ರಮಥರ ಕೃಪೆಯಿಂದ ಪೂಜ್ಯರು ನೂರು ಕಾಲ ಆಯುರೋಗ್ಯದೊಂದಿಗೆ ಬಾಳಿ ಬದುಕಿ ಮತ್ತಷ್ಟು ಸಮಾಜಮುಖಿ ಸಾಧನೆಗಳನ್ನು ಮಾಡಲಿ ಎಂದು ಶುಭ ಹಾರೈಸಿ ಪ್ರಸ್ತುತ ಆಶ್ರಮದ ಪ್ರಗತಿ ಮತ್ತು ಪೂಜ್ಯರ ಏಳು ದಶಕಗಳ ವಸಂತಗಳ ಸೇವಾ ಕಾರ್ಯಗಳು ಸಾರ್ಥಕಗೊಂಡಿವೆ ಆಶ್ರಮವನ್ನು ಜಾತ್ಯಾತೀತ ಹಾಗೂ ಶ್ರದ್ಧಾ-ಭಕ್ತಿಯ ಧಾರ್ಮಿಕ ಕೇಂದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ಪೂಜ್ಯರು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.
ಹೂಸದುರ್ಗದ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದ ಶ್ರೀಗಳು ಮಾತನಾಡಿ, ಶಿವಲಿಂಗಾನಂದ ಮಹಾಸ್ವಾಮೀಜಿಯವರು ಎಂದಿಗೂ ತಮ್ಮ ಜನ್ಮದಿನವನ್ನು ವೈಯಕ್ತಿಕವಾಗಿ ಆಚರಿಸಿಕೊಳ್ಳದೆ, ಶಿಕ್ಷಣ, ಧರ್ಮ ಹಾಗೂ ಸಮಾಜ ಕಲ್ಯಾಣದ ಪವಿತ್ರ ಕಾರ್ಯಗಳ ಮೂಲಕ ನಾಡಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಜನ್ಮದಿನಾಚರಣೆ ಮಾಡಿಕೊಳ್ಳುವುದು ಸಾಮಾನ್ಯವಾದರೂ, ಶಿವಲಿಂಗಾನಂದ ಸ್ವಾಮೀಜಿಯವರು ಮಾತ್ರ ತಮ್ಮ ಹುಟ್ಟುಹಬ್ಬವನ್ನು ಎಂದಿಗೂ ಆಚರಿಸಿ ಕೊಂಡಿಲ್ಲ. ಬದಲಾಗಿ ಅವರು ಶಿವರಾತ್ರಿ ಮಹೋತ್ಸವ ಮತ್ತು ವಿಜಯದಶಮಿಯ ದಸರಾ ಮಹೋತ್ಸವಗಳ ಮೂಲಕ ನಾಡಿನ ಅನೇಕ ಮಠಾಧೀಶರು, ಸಾಹಿತಿಗಳು ಹಾಗೂ ದಿಗ್ಗಜರನ್ನು ಕರೆಸಿ ಜ್ಞಾನ ದಾಸೋಹದಂತಹ ಪವಿತ್ರ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.
ಸ್ವಾಮೀಜಿಯವರು ಸರಳ ಸೌಜನ್ಯದ ಹಾಗೂ ಮಾತೃವಾತ್ಸಲ್ಯವಿರುವ ಪೂಜ್ಯರಾಗಿದ್ದು, ಇವರ 70 ವರ್ಷಗಳ ಸಾರ್ಥಕ ಸೇವೆಯು ನಾಡಿಗೆ ಮತ್ತು ರಾಷ್ಟ್ರಕ್ಕೆ ಅತ್ಯಮೂಲ್ಯವಾದ ಕೊಡುಗೆಯಾಗಿದೆ ಕಬೀರಾನಂದ ಮಹಾಸ್ವಾಮೀಜಿಯವರು ಅರೂಢ ಅವಧೂತರ ಪರಂಪರೆಯಲ್ಲಿ ಈ ಮಠವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ರೂಪಿಸಿದರು. ನಂತರ ಆದಿಚುಂಚನಗರಿ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಆಶೀರ್ವಾದದೊಂದಿಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ವಿದ್ಯಾ ಕೇಂದ್ರವನ್ನು ಸ್ಥಾಪಿಸಿ ಜ್ಞಾನ ಹಾಗೂ ಅನ್ನ ದಾಸೋಹವನ್ನು ನಿರಂತರವಾಗಿ ನಡೆಸುತ್ತಿದ್ದಾರೆ ಮಠದ ವತಿಯಿಂದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಜನರ ಮನಸ್ಸನ್ನು ಬೆಸೆಯುವ ಕಾರ್ಯವಾಗುತ್ತಿದೆ. ಇದರೊಂದಿಗೆ ಗೋಶಾಲೆ, ವೃದ್ಧಾಶ್ರಮ ಹಾಗೂ ಅನಾಥ ಆಶ್ರಮಗಳನ್ನು ನಡೆಸುವುದು ಸವಾಲಿನ ಕೆಲಸವಾಗಿದ್ದರೂ, ಪೂಜ್ಯರು ಇಂತಹ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಾಗಿ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಶಿವಲಿಂಗಾನಂದ ಮಹಾಸ್ವಾಮೀಜಿಯವರು ಯಾವುದೇ ಭೇದ ಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ ಜಾತ್ಯತೀತ ಮಠವನ್ನು ಮುನ್ನಡೆಸುತ್ತಿದ್ದಾರೆ. ಇವರ 70ನೇ ವರ್ಷದ ಈ ವಿಶೇಷ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿ, ಪೂಜ್ಯರ ಸಾರಸ್ವತ ಹಾಗೂ ಸಮಾಜಮುಖಿ ಸಾಧನೆಯಲ್ಲಿ ಸಾಥ್ ನೀಡುವುದೇ ನಮ್ಮೆಲ್ಲರ ಭಾಗ್ಯ ಎಂದು ಹೇಳಿದರು.
ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಸುಮಾರು 30-40 ವರ್ಷಗಳ ಹಿಂದೆ ಆದಿಚುಂಚ ನಗಿರಿ ಮಠದಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ, ಮಂಜೂರು ಹನುಮಂತಪ್ಪನವರ ಮೂಲಕ ಆದಿಚುಂಚನಗಿರಿ ಸ್ವಾಮೀಜಿಯವರ ಬಳಿ ತೆರಳಿ ಚಿತ್ರದುರ್ಗಕ್ಕೆ ಒಬ್ಬ ಸಿದ್ಧರೂಢ ಪರಂಪರೆಯ ಸ್ವಾಮೀಜಿಯನ್ನು ನೀಡುವಂತೆ ಕೇಳಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ಕಬೀರಾನಂದ ಸ್ವಾಮೀಜಿಯವರನ್ನು ಮಠದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಆಗ ಕೇವಲ ಒಂದು ಸಣ್ಣ ಕುಟೀರದಲ್ಲಿದ್ದ ಮಠವು, ಕಳೆದ ಮೂವತ್ತು ವರ್ಷಗಳಲ್ಲಿ ಸ್ವಾಮೀಜಿಯವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಯನ್ನು ಕಂಡಿದೆ ಸ್ವಾಮೀಜಿಯವರು ಮಠದ ಅಭಿವೃದ್ಧಿಗೆ ಹಾಗೂ ಬಡ ಮಕ್ಕಳು, ನಿರ್ಗತಿಕರು ಹಾಗೂ ಸಮಾಜದ ಹಿತಕ್ಕಾಗಿ ಕಳೆದ ಮೂರು ದಶಕಗಳಿಂದ ಹತ್ತಾರು ಶ್ರೇಷ್ಠ ಹಾಗೂ ಸಮಾಜಮುಖಿ ಸೇವೆಗಳನ್ನು ಮಾಡುತ್ತಿದ್ದಾರೆ ಎಂದರು.
ಸುಮಾರು 25 ವರ್ಷಗಳ ಹಿಂದೆ ಚಿತ್ರದುರ್ಗಕ್ಕೆ ಬರಗಾಲ ಬಂದ ಸಂದರ್ಭದಲ್ಲಿ, ಧನಕರುಗಳಿಗೆ ಮೇವಿಲ್ಲದೆ ಹಾಗೂ ಅನೇಕ ಬಡವರಿಗೆ ಊಟಕ್ಕೂ ಗತಿ ಇಲ್ಲದ ಸ್ಥಿತಿಯಲ್ಲಿ, ಆದಿಚುಂಚನಗಿರಿ ಸ್ವಾಮೀಜಿಯವರ ಬಳಿ ಚರ್ಚಿಸಿ ಸುಮಾರು ಲೋಡ್ ರಾಗಿ ತಂದು ಬಡವರಿಗೆ ಹಂಚಿದ ಇತಿಹಾಸ ಈ ಮಠದಿಂದ ನಡೆದಿದೆ ಮಠದ ವತಿಯಿಂದ ಡಿಪ್ಲೋಮಾ ಕಾಲೇಜು, ಬಿ.ಇ. ಕಾಲೇಜು ಹಾಗೂ ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭಿಸಿ, ಈ ಭಾಗದ ಬಡವರ ಮಕ್ಕಳಿಗೆ ವಿಶೇಷವಾದ ಅವಕಾಶಗಳನ್ನು ಮಾಡಿಕೊಡಲಾಗಿದೆ ಮಠದವತಿಯಿಂದ ಅನಾಥ ಮಕ್ಕಳನ್ನು ಸಾಕಿ, ಅವರಿಗೆ ಪಾಠ ಪ್ರವಚನಗಳನ್ನು ನೀಡಿ ಬೆಳೆಸಲಾಗುತ್ತಿದೆ. ಅಲ್ಲದೆ, ವಯಸ್ಸಾದವರಿಗೆ ಆಶ್ರಯ ನೀಡಿ ವೃದ್ಧಾಶ್ರಮವನ್ನು ನಡೆಸುತ್ತಿರುವ ಇತಿಹಾಸವೂ ಈ ಮಠಕ್ಕಿದೆ ಕಾತ್ರಾಳ್ನಲ್ಲಿ ಹಸುಗಳು ಮತ್ತು ಧನಕರುಗಳನ್ನು ಯಾರಾದರೂ ತಂದುಬಿಟ್ಟರೆ ಅವುಗಳನ್ನು ನೋಡಿಕೊಳ್ಳಲು ಗೋಶಾಲೆಯನ್ನು ಪ್ರಾರಂಭಿಸಿ ಸಮಾಜ ಸೇವೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ತಮ್ಮ ಆರ್ಶೀವಚನದಲ್ಲಿ ಮನುಷ್ಯನ ಬದುಕಿನಲ್ಲಿ ಆಯುಷ್, ಕರ್ಮ, ವಿತ್ತ, ವಿದ್ಯಾ ಮತ್ತು ನಿಧನ ಎಂಬ ಐದು ಅಂಶಗಳು ಹುಟ್ಟಿನಿಂದಲೇ ನಿರ್ಧಾರವಾಗಿರುತ್ತವೆ ಲಭ್ಯವಿರುವ ಜೀವನದಲ್ಲಿ ಸದ್ವಿಚಾರಗಳನ್ನು ರೂಢಿಸಿಕೊಳ್ಳುತ್ತಾ, ಉತ್ತಮ ಮನಸ್ಸಿನಿಂದ ಸತ್ಕಾರ್ಯಗಳನ್ನು ಮಾಡಬೇಕು ಮನುಷ್ಯನ ಬದುಕಿನಲ್ಲಿ ಈ ಐದು ಸಂಗತಿಗಳನ್ನು ಹಾಗೂ ಆಯುಷ್ಯವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ ಜೀವನದ ಪ್ರತಿಯೊಂದು ಹಂತದಲ್ಲೂ ಸದ್ಗುರುವಿನ ಮಾರ್ಗದರ್ಶನ ಹಾಗೂ ದೈವಿಕ ಶಕ್ತಿಯ ಮಹತ್ವದ ಅಗತ್ಯವಾಗಿದೆ ಯಾವುದೇ ವಸ್ತು ಅಥವಾ ವ್ಯಕ್ತಿಗೆ ನಿರ್ದಿಷ್ಟ ಅವಧಿಯ ಗ್ಯಾರಂಟಿ ಇದ್ದಂತೆ, ಮನುಷ್ಯನ ಆಯಸ್ಸು ಕೂಡ ಪೂರ್ವಯೋಜಿತವಾಗಿರುತ್ತದೆ. ಕರ್ಮ ಎಂದರೆ ಕೆಲಸವಾಗಿದ್ದು, ದೇವರು ಪ್ರತಿಯೊಬ್ಬರಿಗೂ ಅವರವರ ಕೆಲಸವನ್ನು ನಿಗದಿಪಡಿಸಿದ್ದಾನೆ. ಎಲ್ಲರೂ ಒಂದೇ ರೀತಿಯ ಕೆಲಸ ಮಾಡಲು ಅಥವಾ ಎಲ್ಲರೂ ಸ್ವಾಮಿಗಳಾಗಲು ಸಾಧ್ಯವಿಲ್ಲ ವಿದ್ಯಾ ಎಂದರೆ ಲೌಕಿಕ ಅಥವಾ ಪಾರಮಾರ್ಥಿಕ ವಿದ್ಯೆಯಾಗಿದ್ದು, ಎಲ್ಲರೂ ಮಹಾನ್ ವಿದ್ವಾಂಸರಾಗಲು ಅಥವಾ ವಿಜ್ಞಾನಿಗಳಾಗಲು ಸಾಧ್ಯವಿಲ್ಲ. ಮೇಧಾಶಕ್ತಿಯು ಕೆಲವರಲ್ಲಿ ಮಾತ್ರ ಇರುತ್ತದೆ ಮನುಷ್ಯನ ಮನಸ್ಸು ಪ್ರಶಾಂತವಾಗಿರುವುದೇ ನಿಜವಾದ ಶಾಂತಿಯಾಗಿದೆ. ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್, ಕೆ.ಡಿ.ಪಿ. ಸದಸ್ಯರಾದ ಕೆ.ಸಿ. ನಾಗÀರಾಜ್ ಇಂಡಿಯನ್ ಸಂಸ್ಥೆಯ ಮಾಲಿಕರಾದ ರೂಪೇಶ್, ಸಿದ್ದವ್ವನಹಳ್ಳಿ ಪರಮೇಶ್ವರ್, ಉಪನ್ಯಾಸಕ ಪ್ರೊ. ಬಿ. ರಾಜಶೇಖರಪ್ಪ, ಮೆದೇಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ವಿಜಯಕುಮಾರ್, ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಶ್ರೀಮತಿ ತಿಪ್ಪಮ್ಮ ಮಾಜಿ ಸದಸ್ಯ ವೆಂಕಟೇಶ್, ಜಿ.ಪಂ.ಮಾಜಿ ಸದಸ್ಯ ನರಸಿಂಹರಾಜು, ಬಿಜೆಪಿ ಮುಖಂಡ ಹನುಮಂತಗೌಡ, ಪ್ರಶಾಂತ್, ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ ಯೋಗಿಶ್, ನಿರಂಜನ, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ಸುಬ್ರಾಯಭಟ್ಟರ ವೇದ ಘೋಷ ಮಾಡಿದರೆ ಶ್ರೀಮತಿ ಜ್ಯೋತಿ ಪ್ರಾರ್ಥಿಸಿದರೆ ಮುರುಗೇಶ್ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಆಯಿತೋಳ್ ವಿರೂಪಾಕ್ಷಪ್ಪ ಮತ್ತು ಸಂಗಡಿದರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.