ಬೆಂಗಳೂರು : ಕುಣಿಯಲಾರದವರು ನೆಲ ಡೊಂಕು ಅನ್ನೋ ಹಾಗೆ ಡಿ.ಕೆ ಶಿವಕುಮಾರ್ ಮಾತಾಡಬಾರದು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡಲು ಅಡ್ಡ ಹಾಕಿದ್ದು ಕುಮಾರಸ್ವಾಮಿ ಎಂಬ ಡಿಕೆಶಿ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಕುಮಾರಸ್ವಾಮಿಯವರು ಕೇಂದ್ರದ ಮೇಲೆ ಒತ್ತಡ ಹಾಕಿದ್ದಾರೆ ಅನ್ನೋದಕ್ಕೆ ಏನಾದರೂ ಸಾಕ್ಷಿ ಇದೆಯಾ ಇವರ ಹತ್ರ? ಕೈಲಾಗದೇ ಇರೋರು, ಕುಣಿಯೋದಕ್ಕೆ ಆಗದೇ ಇರೋರು ನೆಲ ಡೊಂಕು ಅಂದರು ಎಂದ ಹಾಗೆ ಆಗುತ್ತೆ. ರಾಮನಗರ ಜಿಲ್ಲೆಯ ಅಸ್ಮಿತೆ ಕಾಪಾಡಬೇಕು ಅನ್ನೋದು ಜಿಲ್ಲೆಯ ಜನರ ಬಯಕೆ. ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡಿದ್ರೆ ಅದು ಅಭಿವೃದ್ಧಿ ಆಗುತ್ತಾ? ಎಂದು ಕೇಳಿದರು.
ಈ ಸರ್ಕಾರದ ವಿದ್ಯುತ್ ಇಲಾಖೆಯಲ್ಲಿ ಸ್ಮಾರ್ಟ್ ಮೀಟರ್‌ನಲ್ಲಿ ದೊಡ್ಡ ಅಕ್ರಮ ನಡೆಯುತ್ತಿದೆ. 7,500 ಸಾವಿರ ಕೋಟಿ ರೂ. ಹಗರಣ ಅದು. ಬ್ಲ್ಯಾಕ್ ಲಿಸ್ಟ್ನಲ್ಲಿ ಇರೋರಿಗೆ ಸ್ಮಾರ್ಟ್ ಮೀಟರ್ ಟೆಂಡರ್ ಕೊಟ್ಟಿದ್ದೀರಿ. 1,500 ಮೀಟರ್‌ಗೆ 5,500 ರೂ. ಪಡೆಯುತ್ತಿದ್ದಾರೆ. ಎಲೆಕ್ಟ್ರಿಕ್ ಪೋಲ್ ಮಾಡೋನಿಗೆ ಮೀಟರ್ ಟೆಂಡರ್ ಕೊಟ್ಟಿದ್ದೀರಾ? ಇಷ್ಟು ಹಗರಣ ನಡೆಯುತ್ತಿದೆ. ಯಾವ ಅಭಿವೃದ್ಧಿ ಕಾಣಬಹುದು ಬೆಂಗಳೂರು ದಕ್ಷಿಣ ಅಂತ ಹೆಸರು ಬದಲಾವಣೆ ಮಾಡಿದ್ರೆ? ಹೆಜ್ಜೆ ಹೆಜ್ಜೆಗೂ ಈ ಸರ್ಕಾರ ಹಗರಣದಲ್ಲಿ ಮುಳುಗಿದೆ ಎಂದು ಹೇಳಿದರು.
ಕುಮಾರಸ್ವಾಮಿ ವಿರುದ್ಧ ಡಿಕೆಶಿ ಏಕವಚನ ಪ್ರಯೋಗ ಮಾಡ್ತಿದ್ದಾರೆ. ಅವರು ಮಾತಾಡಲಿ, ರಾಜ್ಯದ ಜನ ಇದೆಲ್ಲವನ್ನೂ ನೋಡ್ತಿದ್ದಾರೆ. ಇವತ್ತಿಂದ ಅಲ್ಲ ಬಹಳ ದಿನಗಳಿಂದ ಏಕವಚನದಲ್ಲಿ ಮಾತಾಡ್ತಿದ್ದಾರೆ. ಕುಮಾರಸ್ವಾಮಿ ಮಾತ್ರ ಅಲ್ಲ ಎಲ್ಲರಿಗೂ ಅವರು ಹಾಗೇ ಮಾತಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
				 
         
         
         
															 
                     
                     
                     
                     
                    


































 
    
    
        