ಇಸ್ಲಮಾಬಾದ್ : ವಾಯುವ್ಯ ಪಾಕಿಸ್ತಾನದ ಬನ್ನು ಕಂಟೋನ್ಮೆಂಟ್ ಅನ್ನು ಗುರಿಯಾಗಿಸಿಕೊಂಡು ಮಂಗಳವಾರ ಸಂಜೆ ಆತ್ಮಾಹುತಿ ದಾಳಿ ನಡೆಸಲಾಗಿದ್ದು, ಈ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿ 16 ಮಂದಿ ಗಾಯಗೊಂಡಿದ್ದಾರೆ.
ದಾಳಿಯಲ್ಲಿ ಸಾವನ್ನಪ್ಪಿದ 9 ಮಂದಿಯ ಪೈಕಿ 6 ಜನ ಭಯೋತ್ಪಾದಕರೂ ಇದ್ದಾರೆ. ಸ್ಫೋಟಕಗಳು ತುಂಬಿದ್ದ ಎರಡು ವಾಹನಗಳು ಮಿಲಿಟರಿ ಗಡಿ ಗೋಡೆಗೆ ಡಿಕ್ಕಿ ಹೊಡೆದಾಗ ಈ ದಾಳಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಫೀಜ್ ಗುಲ್ ಬಹದ್ದೂರ್ ಜೊತೆ ಸಂಬಂಧ ಹೊಂದಿರುವ ಜೈಶ್ ಅಲ್ ಫರ್ಸಾನ್ ಎಂಬ ಬಣವು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಈ ಗುಂಪು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನೊಂದಿಗೆ ಸಂಬಂಧ ಹೊಂದಿರುವ ಹಲವಾರು ಬಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ.
ಸಾವನ್ನಪ್ಪಿದವರಲ್ಲಿ ಐದು ನಾಗರಿಕರು ಸೇರಿದ್ದಾರೆ, ಆದರೆ ಕಂಟೋನ್ಮೆಂಟ್ನ ಗಡಿ ಗೋಡೆಯ ಪಕ್ಕದಲ್ಲಿರುವ ಮಸೀದಿಯ ಅವಶೇಷಗಳಿಂದ ಇನ್ನೂ ನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ. ಸ್ಫೋಟಗಳಿಂದಾಗಿ ಮಸೀದಿಗೆ ಭಾರೀ ಹಾನಿಯಾಗಿದೆ. ಗಾಯಗೊಂಡ 16 ಜನರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕಳುಹಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ದಾಳಿಯ ನಂತರ, ಸೇನಾ ಅಧಿಕಾರಿಗಳು ಕಂಟೋನ್ಮೆಂಟ್ಗೆ ಹೋಗುವ ಎಲ್ಲಾ ಪ್ರಮುಖ ಮಾರ್ಗಗಳನ್ನು ಮುಚ್ಚಿ ಸ್ಫೋಟದ ಸ್ಥಳಕ್ಕೆ ಪ್ರವೇಶವನ್ನು ನಿರ್ಬಂಧಿಸಿದರು. ಹೆಚ್ಚಿನ ಅನಾಹುತ ತಪ್ಪಿಸಲು ಪ್ರದೇಶದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.