ನವದೆಹಲಿ : ಅಡೆತಡೆಗಳಿಲ್ಲದ ಹೆದ್ದಾರಿ ಸಂಚಾರಕ್ಕಾಗಿ ಖಾಸಗಿ ವಾಹನಗಳಿಗೆ ಮೂರು ಸಾವಿರ ರೂ ಬೆಲೆಯ ಫಾಸ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದೇವೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ‘ಈ ವಾರ್ಷಿಕ ಪಾಸ್ ಒಂದು ವರ್ಷದ ಅವಧಿ ಅಥವಾ 200 ಟ್ರಿಪ್ಗಳಿಗೆ ಅನ್ವಯಿಸಲಿದೆ. ಇದನ್ನು ವಾಣಿಜ್ಯ ಉದ್ದೇಶಕ್ಕಲ್ಲದ ವಾಹನಗಳಿಗೆ ಮಾತ್ರ ವಿತರಿಸಲಾಗುವುದು. ಇದರಲ್ಲಿ ಕಾರು, ಜೀಪು ಮತ್ತು ವ್ಯಾನ್ಗಳು ಸೇರುತ್ತವೆ’ ಎಂದು ತಿಳಿಸಿದ್ದಾರೆ.
‘ಈ ವಾರ್ಷಿಕ ಪಾಸ್ ಪಡೆದು ದೇಶದ ಉದ್ದಗಲದ ಯಾವುದೇ ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚರಿಸಬಹುದು. ಹೊಸ ಪಾಸ್ ಪಡೆಯುವ ಅಥವಾ ನವೀಕರಿಸುವ ಸೌಲಭ್ಯವು ಶೀಘ್ರದಲ್ಲಿ ರಾಜ್ಮಾರ್ಗ್ ಯಾತ್ರಾ ಆ್ಯಪ್ನಲ್ಲಿ ಲಭ್ಯ. ಇದರೊಂದಿಗೆ NHAI ಮತ್ತು MoRTH ಅಂತರ್ಜಾಲ ಪುಟಗಳಲ್ಲೂ ಲಭ್ಯ’ ಎಂದು ಪೋಸ್ಟ್ ಮಾಡಿದ್ದಾರೆ.
’60 ಕಿ.ಮೀ. ವ್ಯಾಪ್ತಿಯಲ್ಲಿನ ಟೋಲ್ ಪ್ಲಾಜಾಗಳು ಮತ್ತು ಟೋಲ್ ಪಾವತಿಯನ್ನು ಸರಳೀಕರಿಸುವ ಬಹುದಿನಗಳ ಬೇಡಿಕೆಯನ್ನು ಈ ಯೋಜನೆ ಮೂಲಕ ಈಡೇರಿಸಲಾಗುತ್ತಿದೆ. ಇದರಿಂದ ಕಾಯುವ ಸಮಯ ತಗ್ಗಲಿದೆ. ಒತ್ತಡ ಮತ್ತು ಟೋಲ್ ಸಿಬ್ಬಂದಿಯೊಂದಿಗಿನ ಅನಗತ್ಯ ವಿವಾದ ತಪ್ಪಿಸಲಿದೆ. ವಾರ್ಷಿಕ ಪಾಸ್ ಮೂಲಕ ಸಂಚಾರ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಆರಾಮದಾಯಕ ಅನುಭವ ಖಾಸಗಿ ವಾಹನ ಮಾಲೀಕರದ್ದಾಗಲಿದೆ’ ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.