ನವದೆಹಲಿ : ನಿತೀಶ್ ಕುಮಾರ್ ಅವರು ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ) (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಪ್ರತಿಪಕ್ಷಗಳು ಟೀಕಿಸುತ್ತಿರುವುದನ್ನು ಬಲವಾಗಿ ಖಂಡಿಸಿದ್ದಾರೆ. “ಪ್ರಧಾನಿಯವರ ಮೇಲೆ ಪ್ರೀತಿ ಇದೆ ಎಂದು ಹಲವಾರು ಬಾರಿ ಪುನರುಚ್ಚರಿಸಿದ್ದೇನೆ. ಬಿಹಾರದಲ್ಲಿ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಚುನಾವಣೆಗಳು ನಡೆಯಲಿವೆ. ಚುನಾವಣಾ ಫಲಿತಾಂಶಗಳ ನಂತರವೂ ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ” ಎಂದು ಹೇಳಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ಈ ಪ್ರಕ್ರಿಯೆಯು ಹಿಂದೆ ನಾಲ್ಕು ಬಾರಿ ನಡೆದಿದ್ದು, ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ” ಎಂದರು.
ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯನ್ನು ಪರಿಶೀಲಿಸಲು ಬಿಹಾರಕ್ಕೆ ಸತ್ಯಶೋಧನಾ ಸಮಿತಿಯನ್ನು ಕಳುಹಿಸುವ ಸಂಬಂಧ ಆರ್‌ಜೆಡಿ ಸಂಸದ ಮನೋಜ್ ಝಾ ಅವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, “ನಾನು ಬಿಹಾರಿ, ನನ್ನ ರಾಜ್ಯದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಮಿತಿಯನ್ನು ಕಳುಹಿಸಬೇಕಾಗಿಲ್ಲ. ನನಗೆ ಪರಿಸ್ಥಿತಿ ತಿಳಿದಿದೆ” ಎಂದು ಹೇಳಿದರು.