ಚಿತ್ರದುರ್ಗ : ಅತಿಯಾದರೆ ಅಮೃತ ವಿಷ ಆದರೆ ಜ್ಞಾನಮೃತ ಎಷ್ಟೇ ಅತಿಯಾದರೂ ವಿಷವಾಗುವುದಿಲ್ಲ. ಜ್ಞಾನಮೃತ ಸ್ವಿಕರಿಸಿದವರು ಯಾವುದಾದರೂ ಕ್ಷೇತ್ರದಲ್ಲಿ ಶಾಶ್ವತ ಕಾರ್ಯನಿರ್ವಹಿಸಿ ಅಮರರಾಗುತ್ತಾರೆ. ಇದಕ್ಕೆ ಡಾ.ಅಂಬೇಡ್ಕರ್ ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಹೊರ ವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಬುಧವಾರ ನಡೆದ ಜ್ಞಾನ ಸಂಭ್ರಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿನ ಸಾಧಕರ ಪಟ್ಟಿಯಲ್ಲಿ ಹೆಸರುಗಳಿಸಬೇಕಾದರೆ ನಾವು ಜ್ಞಾನಾಮೃತವನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕು ಶಿಕ್ಷಣವೆಂದರೆ ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಅದು ಮನುಷ್ಯನಲ್ಲಿ ವಿವೇಕ ಮತ್ತು ಪ್ರಜ್ಞಾವಂತಿಕೆಯನ್ನು ಬೆಳೆಸುವ ಶಕ್ತಿಯಾಗಿದೆ, ಜ್ಞಾನದ ಮೂಲಕ ಮನುಷ್ಯ ತನ್ನನ್ನು ತಾನು ವಿಮರ್ಷಿಸಿಕೊಳ್ಳಲು ಮತ್ತು ಆತ್ಮ ನಿರೀಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಯಾರು ಜ್ಞಾನವನ್ನು ಸ್ವೀಕರಿಸಿ ತಮ್ಮ ಜೀವನವನ್ನು ವಿಮರ್ಶಾತ್ಮಕವಾಗಿ ನೋಡುತ್ತಾರೊ ಅವರು ತಮ್ಮ ಭವಿಷ್ಯವನ್ನು ಅತ್ಯಂತ ಭವ್ಯವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ಚಿಕ್ಕವರಿದ್ದಾಗ ದೊಡ್ಡವರಾದ ಮೇಲೆ ಏನಾಗುತ್ತೀಯಾ ಎಂದು ಕೇಳಿದಾಗ ದಿನವು ಶಾಲೆಗೆ ಕರೆದುಕೊಂಡು ಹೋಗುವ ಟಾಂಗಾ ಚಾಲಕ ಆಗುತ್ತೇನೆ ಎಂದು ಹೇಳುತ್ತಿದ್ದರು. ವಿವೇಕಾನಂದ ತಂದೆ ಅವರ ಮಾತಿಗೆ ಸಿಟ್ಟಾಗದೆ ಕೃಷ್ಣ ಮತ್ತು ಅರ್ಜುನರ ರಥದ ಉದಾಹರಣೆ ನೀಡುತ್ತಿದ್ದರು, ನೀವು ಚಾಲಕರಾಗುವುದಾದರೆ ಜಗತ್ತನ್ನೇ ನಡೆಸಿದ ಶ್ರೀ ಕೃಷ್ಣನಂತಹ ಚಾಲಕನಾಗು ಎಂದು ಮಗನಿಗೆ ಧನಾತ್ಮಕವಾಗಿ ಪ್ರೇರೇಪಿಸುತ್ತಿದ್ದರು. ಜಗತ್ತಿನಲ್ಲಿ ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ, ನಾವು ಆ ಕೆಲಸವನ್ನು ಹೇಗೆ ಭಾವಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂಬುದು ಮುಖ್ಯ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಜ್ಞಾನ ಸಂಭ್ರಮ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡುತ್ತಾ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ತಿಳಿಸಿ ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲಿ, ಉತ್ತಮ ಸಂಸ್ಕಾರ ಮತ್ತು ಆದರ್ಶ ಗುಣಗಳನ್ನು ಬೆಳೆಸಿಕೊಂಡು ಸಮಾಜದ ಆಸ್ತಿಯಾಗಲಿ ಎಂದು ಹಾರೈಸಿದರು.
ಕೋಲಾರ ಜಿಲ್ಲೆಯ ಬಂಗಾರಪೇಟೆ ಸರ್ಕಾರಿ ಪ್ರೌಢಶಾಲೆಗೆ ನಾನು ಮುಖ್ಯೋಪಾದ್ಯಾಯನಾಗಿ ಮಾಡಿದ ಕೆಲಸ ವಿದ್ಯಾರ್ಥಿಗಳನ್ನು ನೋಡಿದಾಗ ನೆನಪಾಗುತ್ತದೆ. ಮಕ್ಕಳೊಂದಿಗಿನ ಬಾಂಧವ್ಯ ಎಂದಿಗೂ ಮರೆಯದ ಸವಿನೆನಪಾಗಿ ಉಳಿದಿದೆ. ಮಕ್ಕಳು ರಾಷ್ಟ್ರದ ಸಂಪತ್ತನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರಲ್ಲಿರುತ್ತದೆ. ಶಿಕ್ಷಕರು ಅದನ್ನು ಉಸಿಗೊಳಿಸದಂತೆ ತಮ್ಮ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಎಸ್.ಜೆ.ಎಸ್ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ.ಮೋಹನ್, ಗೌನಹಳ್ಳಿ ಗೋವಿಂದಪ್ಪ ಮಾತನಾಡಿದರು, ವೇದಿಕೆಯಲ್ಲಿ ಎಸ್.ಜೆ.ಎಸ್ ಸಂಸ್ಥೆಯ ನಿರ್ದೇಶಕರಾದ ಇ.ಮಂಜುನಾಥ್, ಕಾಳಘಟ್ಟ ಹನುಮಂತಪ್ಪ, ಹೆಚ್.ಆಂಜನೇಯ, ವೈ.ಪ್ರಕಾಶ್ ದಾವಣಗೆರೆಯ ರಾಜು ಉಪಸ್ಥಿತರಿದ್ದರು.

































