ನ್ಯೂಯಾರ್ಕ್ : ನೊಬೆಲ್ ಪ್ರಶಸ್ತಿ ವಿಜೇತ ಅಮೆರಿಕನ್ ವಿಜ್ಞಾನಿ ಹಾಗೂ ಡಿಎನ್‌ಎ ರಚನೆಯ ಸಹ-ಆವಿಷ್ಕಾರಕರಾದ ಜೇಮ್ಸ್ ವಾಟ್ಸನ್ (97) ವಿಧಿವಶರಾಗಿದ್ದಾರೆ.
1953ರಲ್ಲಿ ಬ್ರಿಟಿಷ್ ವಿಜ್ಞಾನಿ ಫ್ರಾನ್ಸಿಸ್ ಕ್ರಿಕ್ ಅವರೊಂದಿಗೆ ಸೇರಿ ಡಿಎನ್‌ಎಯ ಡಬಲ್-ಹಿಲಿಕ್ಸ್ ರಚನೆಯನ್ನು ಇವರು ಗುರುತಿಸಿದ್ದರು. ಇದರಿಂದ ಆಣ್ವಿಕ ಜೀವಶಾಸ್ತ್ರದ ಸಂಶೋಧನೆಗೆ ಹೊಸ ಮೈಲಿಗಲ್ಲು ಸಿಕ್ಕಿತ್ತು. ಜೇಮ್ಸ್ ವಾಟ್ಸನ್ ಅವರ ನಿಧನವಾಗಿರುವ ಬಗ್ಗೆ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿ ಮಾಹಿತಿ ನೀಡಿದೆ.
ಜೇಮ್ಸ್ ವಾಟ್ಸನ್ ಅವರು 1928ರ ಏಪ್ರಿಲ್‌ನಲ್ಲಿ ಚಿಕಾಗೋದಲ್ಲಿ ಜನಿಸಿದ್ದು, ತಮ್ಮ 15ನೇ ವಯಸ್ಸಿನಲ್ಲಿ ಚಿಕಾಗೋ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿವೇತನ ಪಡೆದು ಸೇರಿದ್ದರು. ಆ ಬಳಿಕ ಡಿಎನ್‌ಎ ರಚನೆ ಕುರಿತು ಸಂಶೋಧನೆಗಾಗಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯಲ್ಲಿ ಅಧ್ಯಯನ ನಡೆಸಿದ್ದು, ಅಲ್ಲಿಯೇ ಫ್ರಾನ್ಸಿಸ್ ಕ್ರಿಕ್ ಅವರ ಭೇಟಿಯೂ ಆಗಿತ್ತು.
ತಮ್ಮ ವೈಜ್ಞಾನಿಕ ಸಾಧನೆಯ ನಂತರ, ವಾಟ್ಸನ್ ಮತ್ತು ಅವರ ಪತ್ನಿ ಎಲಿಜಬೆತ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ದಂಪತಿಯ ಇಬ್ಬರು ಪುತ್ರರ ಪೈಕಿ, ಓರ್ವನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಸ್ಕಿಜೋಫ್ರೆನಿಯಾ ಎಂಬ ಮಾನಸಿಕ ಕಾಯಿಲೆ ಕಂಡುಬಂದಿತ್ತು. ಇದರಿಂದಾಗಿಯೇ ವಾಟ್ಸನ್ ಅವರಿಗೆ ಡಿಎನ್‌ಎ ಸಂಶೋಧನೆ ಬಗ್ಗೆ ಮತ್ತಷ್ಟು ಆಸಕ್ತಿ ಬೆಳೆಯಿತು.
ಕಪ್ಪು ಮತ್ತು ಬಿಳಿ ಜನರ ನಡುವೆ ಸರಾಸರಿ ಐಕ್ಯೂ ವ್ಯತ್ಯಾಸಕ್ಕೆ ಜೀನ್ಸ್ ಕಾರಣವೆಂದು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ವಾಟ್ಸನ್ ಹೇಳಿಕೆ ನೀಡಿದ್ದು, ಭಾರಿ ವಿವಾದ ಸೃಷ್ಟಿಸಿತ್ತು. 2007ರಲ್ಲಿ ದಿ ಟೈಮ್ಸ್ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಆಫ್ರಿಕಾದ ಭವಿಷ್ಯದ ಬಗ್ಗೆ ನಾನೇನು ಆಶಾವಾದಿಯಾಗಿಲ್ಲ, ಏಕೆಂದರೆ ನಮ್ಮ ಎಲ್ಲಾ ಸಾಮಾಜಿಕ ನೀತಿಗಳು ಅವರ ಬುದ್ಧಿಮತ್ತೆ ನಮ್ಮಂತೆಯೇ ಇದೆ ಎಂಬ ನಂಬಿಕೆಗೆ ಆಧಾರಿತವಾಗಿದೆ. ಆದರೆ ಎಲ್ಲಾ ಪರೀಕ್ಷೆಗಳು ಅದು ಸರಿ ಅಲ್ಲ ಎಂದು ತೋರಿಸುತ್ತಿವೆ ಎಂದಿದ್ದರು. ಆ ಬಳಿಕ ಅವರು ಈ ಬಗ್ಗೆ ಕ್ಷಮೆ ಯಾಚಿಸಿದ್ದರೂ ಕೋಲ್ಡ್ ಸ್ಪ್ರಿಂಗ್ ಹಾರ್ಬರ್ ಲ್ಯಾಬೊರೇಟರಿಯ ಚಾನ್ಸಲರ್ ಹುದ್ದೆಯಿಂದ ವಜಾಮಾಡಲಾಗಿತ್ತು.
































