ಅಯೋಧ್ಯೆ ಆಡಳಿತ ಮಂಡಳಿಯು ರಾಮ ಮಂದಿರದ 15 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸಾಹಾರ ಪದಾರ್ಥಗಳ ವಿತರಣೆಯನ್ನ ನಿಷೇಧಿಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಆನ್ಲೈನ್ ಮೂಲಕ ಪದೇ ಪದೇ ಮಾಂಸಾಹಾರ ಪದಾರ್ಥಗಳನ್ನು ಪೂರೈಕೆ ಮಾಡುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಂಚಕೋಶ ಪರಿಕ್ರಮ’ದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಅಯೋಧ್ಯೆಯಲ್ಲಿನ ಕೆಲವು ಹೋಟೆಲ್ಗಳು ಮತ್ತು ಹೋಂ ಸ್ಟೇಗಳು ಅತಿಥಿಗಳಿಗೆ ಮಾಂಸಾಹಾರ ಮತ್ತು ಮದ್ಯ ಪೂರೈಕೆ ಮಾಡುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ. ಅಂತಹ ಚಟುವಟಿಕೆಗಳಿಂದ ದೂರ ಇರುವಂತೆ ಅಧಿಕಾರಿಗಳು ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಯೋಧ್ಯೆ ಮತ್ತು ಫೈಜಾಬಾದ್ ಸಂಪರ್ಕಿಸುವ ಮಾರ್ಗವಾದ 14 ಕಿಮೀ ರಾಮ ಪಥದಲ್ಲಿ ಮದ್ಯ ಮತ್ತು ಮಾಂಸ ಮಾರಾಟ ನಿಷೇಧಿಸಲು ಅಯೋಧ್ಯೆ ಪುರಸಭೆ ಮೇ 2025 ರಲ್ಲಿ ನಿರ್ಧಾರ ತೆಗೆದುಕೊಂಡಿತ್ತು.
ಆದರೆ 9 ತಿಂಗಳೂ ಕಳೆದರೂ ಈ ಕಟ್ಟುನಿಟ್ಟಿನ ಕ್ರಮ ಜಾರಿಯಾಗಿರಲಿಲ್ಲ. ಇದರಿಂದ ಸುಮಾರು 20ಕ್ಕೂ ಹೆಚ್ಚು ಮಳಿಗೆಗಳು ಈ ಪ್ರದೇಶದಲ್ಲಿ ಮದ್ಯ ಮಾರಾಟ ಮಾಡುತ್ತಿವೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಆಹಾರ ಇಲಾಖೆಯ ಸಹಾಯಕ ಆಯುಕ್ತ ಮಾಣಿಕ್ ಚಂದ್ರ ಸಿಂಗ್, ಫೈಜಾಬಾದ್ನ ರೋಸ್ ಸೇರಿದಂತೆ ರಾಮ್ ಪಥ್ ನಾದ್ಯಂತದ ಮಾಂಸದ ಅಂಗಡಿಗಳನ್ನ ಸಿವಿಐಸಿ ಸಂಸ್ಥೆ ತೆಗೆದುಹಾಕಿದೆ.
ನಿಷೇಧದ ಹೊರತಾಗಿಯೂ ಆನ್ಲೈನ್ ಪ್ಲಾಟ್ಫಾರ್ಮ್ಗಳ ಮೂಲಕ ಪ್ರವಾಸಿಗರಿಗೆ ಮಾಂಸಾಹಾರ ಪದಾರ್ಥಗಳನ್ನ ಪೂರೈಕೆ ಮಾಡುವುದು ಮುಂದುವರಿದಿದೆ ಎಂಬ ದೂರು ಕೇಳಿಬಂದಿತ್ತು. ದೂರುಗಳ ನಂತರ, ಆನ್ಲೈನ್ನಲ್ಲಿ ಮಾಂಸಾಹಾರಿ ಆಹಾರ ವಿತರಣೆಗೂ ನಿಷೇಧ ಹೇರಲಾಗಿದೆ. ಎಲ್ಲಾ ಹೋಟೆಲ್, ಮಳಿಗೆಗಳಿಗೂ ಸೂಚನೆ ನೀಡಲಾಗಿದೆ. ಕ್ರಮ ಜಾರಿಯಾಗಿರುವ ಬಗ್ಗೆ ಮತ್ತೆ ಮೇಲ್ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
































