ಕೊಚ್ಚಿ: ಮುಸ್ಲಿಂ ಬಾಲಕಿಯರು ಶಾಲೆಗೆ ಹಿಜಾಬ್ ಧರಿಸಿ ಬರಲು ಅನುಮತಿಸದಿರುವುದು ಅವರ ಖಾಸಗಿತನ ಮತ್ತು ಘನತೆಯ ಸ್ಪಷ್ಟ ಉಲ್ಲಂಘನೆ ಎಂದು ಕೇರಳ ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ವಾದ ಮಂಡಿಸಿದೆ. ಜತೆಗೆ ಈ ಅನುಮತಿ ನಿರಾಕರಣೆಯು ಆಕೆಗೆ ಜಾತ್ಯತೀತ ಶಿಕ್ಷಣವನ್ನು ನಿರಾಕರಿಸಿದಂತೆ ಎಂದು ಅಭಿಪ್ರಾಯಪಟ್ಟಿದೆ.
ಮನೆಯಲ್ಲಿ ಮತ್ತು ಮನೆಯ ಹೊರಗೆ ಹಿಜಾಬ್ ಧರಿಸಲು ಅನುಮತಿ ಇರುವಾಗ ಅದನ್ನು ಶಾಲೆಯ ಗೇಟಿನಲ್ಲಿ ತಡೆಯಲಾಗದು ಎಂದು ಸ್ಪಷ್ಟಪಡಿಸಿದೆ.
ಪಳ್ಳುರುತ್ತಿ ಎಂಬಲ್ಲಿ ಚರ್ಚ್ ಒಡೆತನದ ಸೈಂಟ್ ರೀಟಾ ಪಬ್ಲಿಕ್ ಸ್ಕೂಲ್ ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ಸರ್ಕಾರ ಸಲ್ಲಿಸಿದ ಅಫಿಡವಿಟ್ ನಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಮುಸ್ಲಿಂ ಬಾಲಕಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಶಾಲೆಯ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು. ಸಂಸ್ಥೆ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿ ಶಿಕ್ಷಣ ಇಲಾಖೆ ನೋಟಿಸ್ ನೀಡಿರುವುದನ್ನು ಕೂಡಾ ಸಂಸ್ಥೆ ಪ್ರಶ್ನಿಸಿದೆ.
ಶುಕ್ರವಾರ ಈ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ಸಂದರ್ಭದಲ್ಲಿ ಬಾಲಕಿಯ ಪರವಾಗಿ ಹಾಜರಾದ ವಕೀಲರು, ಈ ಶಾಲೆಯಲ್ಲಿ ಬಾಲಕಿ ವಿದ್ಯಾಭ್ಯಾಸ ಮುಂದುವರಿಸದಿರಲು ಪೋಷಕರು ನಿರ್ಧರಿಸಿದ್ದು, ಆಕೆಯನ್ನು ಬೇರೆ ಶಾಲೆಗೆ ಸೇರಿಸಿದ್ದಾಗಿ ವಿವರಿಸಿದರು.
































