ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಭೆಗೆ ಸತತ ಗೈರಾಗಿದ್ದ ಕಾರಣಕ್ಕೆ ಹಿರಿಯ ಐಎಎಸ್ ಅಧಿಕಾರಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪಂಕಜ್ ಕುಮಾರ್ ಪಾಂಡೆಯವರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ನೋಟಿಸ್ ನೀಡಿದ್ದಾರೆ.
ಜನವರಿ 20ರಂದು ನಡೆದ ಮುಖ್ಯಮಂತ್ರಿ ಅವರ ಸಭೆಗೆ ಹಾಜರಾಗುವಂತೆ ಪಂಕಜ್ ಕುಮಾರ್ ಪಾಂಡೆಯವರಿಗೆ ಮುಖ್ಯಮಂತ್ರಿಯವರ ಕಾರ್ಯಾಲಯದಿಂದ ಸೂಚನೆ ನೀಡಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಅವರು ಹಾಜರಾಗಿರಲಿಲ್ಲ.
ಈ ಹಿಂದೆಯೂ ಹಲವು ಸಭೆಗಳಿಗೆ ಸತತವಾಗಿ ಗೈರು ಹಾಜರಾಗಿದ್ದಾರೆ. ಜನವರಿ 20ರ ಸಭೆಗೆ ನಿಗದಿತ ಸಮಯಕ್ಕೆ ಹಾಜರಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ ಸಿದ್ದರಾಮಯ್ಯ ಪಂಕಜ್ ಕುಮಾರ್ ಪಾಂಡೆ ವಿರುದ್ಧ ಗರಂ ಆಗಿದ್ದರು.
ಈ ಹಿನ್ನೆಲೆಯಲ್ಲಿ ಅವರ ಅಶಿಸ್ತನ್ನು ಕರ್ತವ್ಯ ಲೋಪ ಎಂದು ಪರಿಗಣಿಸಲಾಗಿದ್ದು, ಲಿಖಿತ ವಿವರಣೆಯೊಂದಿಗೆ ಉತ್ತರ ನೀಡುವಂತೆ ಅವರಿಗೆ ಸಿಎಸ್ ಶಾಲಿನಿ ರಜನೀಶ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.

































