ತಿರುನಂತಪುರಂ : ಕೊಚ್ಚಿಗೆ ಬರುತ್ತಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ತುಂಬಿದ ಕಂಟೇನರ್ಗಳು ಸಮುದ್ರ ಪಾಲಾಗಿವೆ. ಸುಮಾರು 10 ಕಂಟೇನರ್ಗಳು ಸಮುದ್ರ ಪಾಲಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಕಂಟೇನರ್ಗಳು ದಡಕ್ಕೆ ಬಂದ್ರೆ ಅವುಗಳ ಬಳಿ ತೆರಳದಂತೆ ಕೇರಳ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರವು ಸಾರ್ವಜನಿಕರಿಗೆ ಎಚ್ಚರಿಸಿದೆ. ಈಗಾಗಲೇ ಸ್ಥಳಕ್ಕೆ ಧಾವಿಸಿರುವ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಅಪಘಾತ ಸಂಭವಿಸಿದೆ. ಲೈಬೀರಿಯಾ ಧ್ವಜ ಹೊತ್ತಿದ್ದ ಹಡಗು ವಿಝಿಂಜಂನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಒಂದು ಭಾಗಕ್ಕೆ ವಾಲಿದ್ದರಿಂದ ಸುಮಾರು 10 ಕಂಟೇನರ್ಗಳು ಸಮುದ್ರಕ್ಕೆ ಬಿದ್ದಿವೆ ಎಂದು ವರದಿಗಳು ತಿಳಿಸಿವೆ
ಹಡಗಿನಲ್ಲಿದ್ದ ಎಲ್ಲ 24 ಸಿಬ್ಬಂದಿಯನ್ನ ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ರಕ್ಷಿಸಿದೆ. ಕಂಟೇನರ್ಗಳಲ್ಲಿ ಮರೀನ್ ಗ್ಯಾಸ್ ಆಯಿಲ್ (ಹಡಗು, ನೌಕೆಗಳಲ್ಲಿ ಬಳಸುವ ಇಂಧನ) ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಅಪಾಯಕಾರಿ ವಸ್ತು ಹೊಂದಿರುವ ಕಂಟೇನರ್ಗಳು ಸಮುದ್ರಕ್ಕೆ ಬಿದ್ದಿದ್ದು, ಅವು ದಡಕ್ಕೆ ಸೇರಬಹುದು ಎಂದು ಕರಾವಳಿ ಕಾವಲು ಪಡೆ ಎಚ್ಚರಿಸಿದೆ. ಒಂದು ವೇಳೆ ದಡದಲ್ಲಿ ತೇಲುತ್ತಿರುವ ವಸ್ತುಗಳು ಕಂಡುಬಂದ್ರೆ, ಜನ ಅವುಗಳ ಹತ್ತಿರಕ್ಕೆ ಹೋಗದೇ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಕಾವಲು ಪಡೆ ಸೂಚನೆ ನೀಡಿದೆ.