ಚಿತ್ರದುರ್ಗ : ಚಿತ್ರದುರ್ಗ ಡಿಡಿಪಿಐ ಕಚೇರಿಯಲ್ಲಿ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಿಬ್ಬಂದಿಯೋರ್ವ ಕಾರು ಖರೀದಿ ಮಾಡಿದ ಪ್ರಯುಕ್ತ ಕಚೇರಿಯಲ್ಲೇ ಪಾರ್ಟಿ ಮಾಡಲಾಗಿದೆ. ಮದ್ಯ ಬೆರೆಸಿದ್ದ ವಾಟರ್ಕ್ಯಾನ್ ಕಚೇರಿಗೆ ತಂದಿದ್ದ ಸಿಬ್ಬಂದಿ, ಕಚೇರಿಯಲ್ಲೇ ಸಿಬ್ಬಂದಿ ಕುಡಿದು ಮೋಜು ಮಸ್ತಿ ಮಾಡಿದ್ದಾರೆ. ಸಿಬ್ಬಂದಿ ಮದ್ಯದ ಪಾರ್ಟಿಗೆ ಸರ್ಕಾರಿ ಕಚೇರಿ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಡಿಡಿಪಿಐ ಮಂಜುನಾಥ್ ಕಾರು ಚಾಲಕ ಮತ್ತಿತರ ಸಿಬ್ಬಂದಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯ ಕೆಲ ಸಿಬ್ಬಂದಿ ಗುಂಡು ಪಾರ್ಟಿ ಮಾಡಿದ ಆರೋಪದಡಿ ಐದು ಜನರನ್ನು ಅಮಾನತು ಮಾಡಲಾಗಿದೆ.20 ಲೀಟರ್ ಕುಡಿಯುವ ನೀರಿನ ಕ್ಯಾನ್ ಗೆ ಬಿಯರ್ ಹಾಕಿ, ಸ್ವಲ್ಪ ಕುಡಿದು ನಂತರ ಅಲ್ಲಿಂದ ಕಾರಿಗೆ ಕ್ಯಾನ್ ಶಿಫ್ಟ್ ಮಾಡುವ ವೀಡಿಯೋ ವೈರಲ್ ಆಗಿತ್ತು.ಈ ವರದಿ ತಿಳಿಯುತ್ತಿದ್ದಂತೆ ಡಿಡಿಪಿಐ ಮಂಜುನಾಥ್ ಐದು ಜನ ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.
ಶಿಕ್ಷಣ ಇಲಾಖೆ ಸಿಬ್ಬಂದಿಗಳಾದ ರವಿಕುಮಾರ್, ಗಣೇಶ್, ತಿಪ್ಪೇಸ್ವಾಮಿ, ಸ್ವಾಮಿ, ಸುನೀಲ್ ಕುಮಾರ್ ಅಮಾನತುಗೊಂಡಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಡಿಪಿಐ ಮಂಜುನಾಥ್, ಕಚೇರಿಯ ಜೀಪ್ ಶೆಡ್ ನಲ್ಲಿ ಈ ಘಟನೆ ನಡೆದಿದ್ದು, ವಾಹನ ಚಾಲಕ ರವಿ, ಡಿ ಗ್ರೂಪ್ ನೌಕರ ತಿಪ್ಪೇಸ್ವಾಮಿ, ಪ್ರಥಮ ದರ್ಜೆ ಸಹಾಯಕರಾದ ಗಣೇಶ ಹಾಗೂ ಸ್ವಾಮಿ, ಸೂಪರಿಂಟೆಂಡೆಂಟ್ ಸುನೀಲ್ ಅಮಾನತು ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಮಾಹಿತಿ ಸಲ್ಲಿಸಿದ್ದೇನೆ.ಈ ಘಟನೆ ಆಗಬಾರದಿತ್ತು, ನಮ್ಮ ಸಿಬ್ಬಂದಿ ತಪ್ಪು ಮಾಡಿದ್ದಾರೆ. ಕೃತ್ಯ ಎಸಗಿದವರ ವಿರುದ್ಧ ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.