ನವದೆಹಲಿ: ಸಹಕಾರಿ ತತ್ವದ ಮೇಲೆ ರೂಪುಗೊಂಡಿರುವ ಹೊಸ ಕ್ಯಾಬ್ ಸೇವೆಯಾದ ಭಾರತ್ ಟ್ಯಾಕ್ಸಿ ಗುರುವಾರ ಅಧಿಕೃತವಾಗಿ ಆರಂಭವಾಗುತ್ತಿದೆ. ಅಮುಲ್ ಸೇರಿದಂತೆ ವಿವಿಧ ಸಹಕಾರಿ ಹಾಗೂ ಸರ್ಕಾರಿ ಸಂಸ್ಥೆಗಳ ಬೆಂಬಲ ಹೊಂದಿರುವ ಈ ಸೇವೆ ಸದ್ಯ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಕಾರ್ಯಾರಂಭ ಮಾಡಲಿದೆ.
ಗುರುವಾರ ಮಧ್ಯಾಹ್ನ ಗೃಹ ಸಚಿವ ಅಮಿತ್ ಶಾ ಅವರು ಭಾರತ್ ಟ್ಯಾಕ್ಸಿ ಸೇವೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಈ ಮೂಲಕ ಕ್ಯಾಬ್ ಸೇವಾ ಕ್ಷೇತ್ರದಲ್ಲಿ ಓಲಾ ಮತ್ತು ಊಬರ್ಗಳ ಪ್ರಾಬಲ್ಯಕ್ಕೆ ಸವಾಲು ಹಾಕಲು ಭಾರತ್ ಟ್ಯಾಕ್ಸಿ ಅಖಾಡಕ್ಕೆ ಇಳಿದಂತಾಗಿದೆ. ಭಾರತ್ ಟ್ಯಾಕ್ಸಿ ಸಹಕಾರಿ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಕ್ಯಾಬ್ ಸೇವೆಯಾಗಿದ್ದು, ಇದನ್ನು ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಎಂಬ ಸಂಸ್ಥೆ ನಿರ್ವಹಿಸುತ್ತದೆ. ಸರ್ಕಾರದಿಂದ ನೇರ ಹಣಕಾಸು ಬೆಂಬಲ ಇಲ್ಲದಿದ್ದರೂ, ಲಾಭೋದ್ದೇಶವಿಲ್ಲದ ಸಹಕಾರಿ ತತ್ವವೇ ಇದರ ಪ್ರಮುಖ ವಿಶೇಷತೆ.
ಈ ಸೇವೆಯಲ್ಲಿ ಚಾಲಕರೇ ಮಾಲೀಕರು. ಓಲಾ ಮತ್ತು ಊಬರ್ಗಳು ಚಾಲಕರಿಂದ ಶೇ.30ರಿಂದ 40ರವರೆಗೆ ಕಮಿಷನ್ ಪಡೆಯುವ ಸಂದರ್ಭದಲ್ಲಿ, ಭಾರತ್ ಟ್ಯಾಕ್ಸಿಯಲ್ಲಿ ಯಾವುದೇ ಪ್ಲಾಟ್ಫಾರ್ಮ್ ಶುಲ್ಕವಿಲ್ಲ. ಇದರಿಂದ ಚಾಲಕರಿಗೆ ಹೆಚ್ಚಿನ ಆದಾಯ ದೊರೆಯುವ ಜೊತೆಗೆ, ಗ್ರಾಹಕರಿಗೂ ಕಡಿಮೆ ದರದಲ್ಲಿ ಸೇವೆ ಲಭ್ಯವಾಗಲಿದೆ. ಹೀಗಾಗಿ ಇದು ಚಾಲಕರು ಮತ್ತು ಗ್ರಾಹಕರು ಇಬ್ಬರಿಗೂ ‘ವಿನ್-ವಿನ್’ ಮಾದರಿಯಾಗಿದೆ. ಭಾರತ್ ಟ್ಯಾಕ್ಸಿಯಲ್ಲಿ ಚಾಲಕರನ್ನು “ಸಾರಥಿಗಳು” ಎಂದು ಕರೆಯಲಾಗುತ್ತದೆ. ಈ ಸೇವೆಗೆ ಸೇರಲು ಸಾರಥಿಗಳು ಕನಿಷ್ಠ ಐದು ಷೇರುಗಳನ್ನು ಖರೀದಿಸಬಹುದು. ಇದರ ವೆಚ್ಚ ಸುಮಾರು 500 ರೂಪಾಯಿಗಳಾಗಿದ್ದು, ಸಂಸ್ಥೆ ವೃದ್ಧಿಯಾದಂತೆ ಈ ಷೇರುಗಳಿಂದ ಡಿವಿಡೆಂಡ್ ಲಭಿಸುವ ವ್ಯವಸ್ಥೆಯಿದೆ.
ಸದ್ಯ ಭಾರತ್ ಟ್ಯಾಕ್ಸಿಯಲ್ಲಿ ಎಸಿ ಮತ್ತು ನಾನ್-ಎಸಿ ಕ್ಯಾಬ್ಗಳು, ಎಕ್ಸ್ಎಲ್ ಕ್ಯಾಬ್ಗಳು, ಆಟೋ ಹಾಗೂ ಬೈಕ್ ಟ್ಯಾಕ್ಸಿ ಸೇವೆಗಳು ಲಭ್ಯವಿವೆ. ಇದರ ಮೊಬೈಲ್ ಆ್ಯಪ್ ಆಧುನಿಕ ಇಂಟರ್ಫೇಸ್ ಹೊಂದಿದ್ದು, ಬಳಕೆದಾರ ಸ್ನೇಹಿಯಾಗಿರುವುದಾಗಿ ತಿಳಿಸಲಾಗಿದೆ. 2025ರ ಡಿಸೆಂಬರ್ನಲ್ಲಿ ದೆಹಲಿ ಮತ್ತು ಗುಜರಾತ್ನಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದ ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಯಶಸ್ಸಿನ ಹಿನ್ನೆಲೆಯಲ್ಲಿ ಇದೀಗ ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಅಧಿಕೃತವಾಗಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರಮುಖ ನಗರಗಳಲ್ಲಿಯೂ ಭಾರತ್ ಟ್ಯಾಕ್ಸಿ ಸೇವೆ ವಿಸ್ತರಿಸುವ ಗುರಿಯನ್ನು ಹೊಂದಿದೆ.





























