ಬೆಂಗಳೂರು : ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪಲ್ಲವಿಯನ್ನ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಗರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲೇ ಓಂ ಪ್ರಕಾಶ್ ನಿನ್ನೆ ಭೀಕರವಾಗಿ ಹತ್ಯೆಯಾಗಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಓಂ ಪ್ರಕಾಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಪುತ್ರ ದೂರು ನೀಡಿದ್ದರು. ಮೊದಲಿಗೆ ಯಾರನ್ನು ಬಂಧಿಸಿರಲಿಲ್ಲ. ಅವರ ಪತ್ನಿ, ಮಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಇದೀಗ ಪ್ರಕರಣ ಸಂಬಂಧ ಓಂ ಪ್ರಕಾಶ್ ಪತ್ನಿ ಪಲ್ಲವಿ ಅವರನ್ನು ಬಂಧಿಸಿಲಾಗಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪಲ್ಲವಿ, ಪುತ್ರಿ ಕೃತಿ, ಪುತ್ರ ಕಾರ್ತಿಕೇಶ್ ಸೇರಿದಂತೆ ಕುಟುಂಬಸ್ಥರು ಮತ್ತು ಸಂಬಂಧಿಕರ ಹೇಳಿಕೆಯನ್ನು ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಒಟ್ಟು 3 ಮೊಬೈಲ್ ಸೀಜ್ ಮಾಡಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಆತ್ಮ ರಕ್ಷಣೆಗಾಗಿ ಕೊಲೆ ಮಾಡಿರುವುದಾಗಿ ಪತ್ನಿ ಪಲ್ಲವಿ ತಿಳಿಸಿದ್ದಾರೆ.
ಇದೀಗ ಪತ್ನಿ ಪಲ್ಲವಿ ಓಂ ಪ್ರಕಾಶ್ ಅವರ ಕೊಲೆ ರಹಸ್ಯ ಬಿಚ್ಚಿಟ್ಟಿದ್ದು, ಮೊದಲು ಓಂ ಪ್ರಕಾಶ್ ಮೇಲೆ ಖಾರದ ಪುಡಿ ಎರಚಿ, ಬಳಿಕ ಅಡುಗೆ ಎಣ್ಣೆಯನ್ನೂ ಸುರಿದಿದ್ದಾರೆ. ಕೈ ಕಾಲು ಕಟ್ಟಿ ಚಾಕುವಿನಿಂದ ಚುಚ್ಚಿದ್ದಾಗಿ ಪಲ್ಲವಿ ತಿಳಿಸಿದ್ದಾರೆ. ಓಂ ಪ್ರಕಾಶ್‌ಗೆ 8-10 ಬಾರಿ ಇರಿಯಲಾಗಿದ್ದು, ಎದೆ, ಹೊಟ್ಟೆ, ಕೈಗೆ ಚಾಕುವಿನಿಂದ ಇರಿಯಲಾಗಿದೆ. ಹೊಟ್ಟೆ ಭಾಗಕ್ಕೆ 4-5 ಬಾರಿ ಇರಿದು ಕೊಲೆ ಮಾಡಲಾಗಿದೆ.