ನಿವೃತ್ತ ಡಿಜಿಪಿ ಮತ್ತು ಐಜಿಪಿ ಓಂಪ್ರಕಾಶ್ ಅವರ ಕೊಲೆಯ ವಿಚಾರದಲ್ಲಿ ಪಿಎಫ್‌ಐ ಪಾತ್ರವಿರುವ ಬಗ್ಗೆ ಸಂಶಯ ಇರುವುದಾಗಿ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಓಂಪ್ರಕಾಶ್ ಅವರ ಕೊಲೆಯ ವಿಚಾರದಲ್ಲಿ ಪಿಎಫ್‌ಐ ಪಾತ್ರವಿರುವ ಬಗ್ಗೆ ಸಂಶಯ ಇದ್ದು, ಈ ಕುರಿತು ಎನ್‌ಐಎ ತನಿಖೆ ನಡೆಸಿ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್, ಸ್ಪೀಕರ್ ಯು.ಟಿ. ಖಾದರ್ ಅವರ ಪಾತ್ರವಿದೆಯೇ ಎಂದು ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಓಂಪ್ರಕಾಶ್ ಅವರ ಪತ್ನಿ ಪಲ್ಲವಿ ಅವರನ್ನು ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳು ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ಸಲುವಾಗಿ ಆರೋಪಿಯಾಗಿ ಸಿಕ್ಕಿಸಿ ಹಾಕಿದ್ದಾರೆ. ಮೃತ ಓಂಪ್ರಕಾಶ್ ಅವರಿಗೆ ಪಿಎಫ್‌ಐ ನಂಟು ಇದೆ ಎಂದು ಪಲ್ಲವಿ ಅವರು ವಾಟ್ಸಪ್ ಗ್ರೂಪ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವಾಗ ಎಲ್ಲಾ ರೀತಿಯ ಕ್ರಿಮಿನಲ್‌ಗಳ ಪರಿಚಯವಾಗುತ್ತದೆ. ಆದರೆ ನಿವೃತ್ತರಾದ ಬಳಿಕ ಯಾವ ರೀತಿಯ ಸಂಪರ್ಕವಿತ್ತು ಎಂಬುದು ತಿಳಿಯಬೇಕಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಲ್ಲಿ ಪೊಲೀಸ್ ಇಲಾಖೆಯಲ್ಲಿ ನಿಷೇಧಿತ ಉಗ್ರ ಸಂಘಟನೆಯಾದ ಪಿಎಫ್‌ಐ ಸದಸ್ಯರನ್ನು ನೇಮಕ ಮಾಡಲಾಗುತ್ತಿದೆಯೇ ಎಂದು ಕೂಡ ಪರಿಶೀಲನೆ ಮಾಡಬೇಕು ಎಂದು ಹೇಳಿದರು.
‘ಐ ಹ್ಯಾವ್ ಕಿಲ್ ದಿ ಮೋನ್‌ಸ್ಟರ್’ ಎಂದು ಪಲ್ಲವಿ ಅವರು ಹೇಳಿದ್ದನ್ನು ನಂಬುವ ಪೊಲೀಸರು ಕೊಲೆಯಲ್ಲಿ ಮಗಳು ಕೃತಿಯ ಪಾತ್ರವಿಲ್ಲ ಎಂದು ಆ ತಾಯಿ ಹೇಳಿದನ್ನು ಯಾಕೆ ನಂಬುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಓಂಪ್ರಕಾಶ್ ರವರ ಕೊಲೆ ಪ್ರಕರಣದಲ್ಲಿ ಯಾವ ರೀತಿ ಪಿಎಫ್‌ಐ ಸದಸ್ಯರ ಕೈವಾಡವಿದೆ ಎಂಬ ಬಗ್ಗೆ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿ ಪೊಲೀಸ್ ಡಿಜಿಪಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರಿಗೆ ಪತ್ರ ಬರೆದಿರುತ್ತೇನೆ, ಇನ್ನಾದರೂ ಅಲ್ಪಸಂಖ್ಯಾತರ ಓಲೈಕೆಗಾಗಿ ದಲಿತ ಸಮುದಾಯಕ್ಕೆ ಸೇರಿದ ಪೊಲೀಸ್ ಅಧಿಕಾರಿಗಳನ್ನು, ಅವರ ಮನೆಯ ಮಹಿಳೆಯರನ್ನು ಬಲಿ ನೀಡುವುದನ್ನು ನಿಲ್ಲಿಸಿರಿ ಎಂದು ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
