ಬೆಂಗಳೂರು: ಬಿಜೆಪಿಯ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಇದೇ ಏ.17 ರಂದು ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ. ಅವರ ಜನಾಕ್ರೋಶ ಯಾತ್ರೆಯ ವಿರುದ್ಧ ನಾವು ಏನಾದರೂ ಮಾಡಬೇಕಲ್ಲ. ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಕೇವಲ ರಾಜ್ಯ ಸರ್ಕಾರ ಏರಿಸಿದ ಹಾಲಿನ ದರ ಮಾತ್ರ ಕಣ್ಣಿಗೆ ಕಾಣುತ್ತಿದೆಯೇ? ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಡುತ್ತಿರುವ ಯಾತ್ರೆ. ಬಿಜೆಪಿಯವರು ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರದವರು ಪೆಟ್ರೋಲ್, ಡೀಸೆಲ್‌ಗೆ ತಲಾ 2 ರೂಪಾಯಿ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಜಾಸ್ತಿ ಮಾಡಿ ಉದ್ಘಾಟನೆ ಮಾಡಿ, ಇವರ ಯಾತ್ರೆಗೆ ‘ಗಿಫ್ಟ್’ ಕಳಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿರುವ ಜನಾಕ್ರೋಶ ಯಾತ್ರೆ ಎಂದು ಬಿಜೆಪಿಯವರು ಬೋರ್ಡ್ ಹಾಕಿಕೊಳ್ಳಬೇಕು ಎಂದು ತಿರುಗೇಟು ಕೊಟ್ಟರು. ಕಚ್ಚಾ ತೈಲದ ಬೆಲೆ ಶೇ.4.23 ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್‌ನ ಮೂಲ ದರ ಪ್ರತಿ ಲೀಟರ್‌ಗೆ 42.60 ಪೈಸೆ ಇದೆ. ದೇಶದಾದ್ಯಂತ ಪ್ರತಿ ಲೀಟರ್ ಪೆಟ್ರೋಲ್ 103 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಲೀಟರ್‌ಗೆ 60 ರೂ. ಲಾಭ ಸರ್ಕಾರಕ್ಕೆ ಸಿಗುತ್ತಿದೆ. ಡೀಸಲ್ ಬೆಲೆ 91 ರೂ. ಇದೆ. 43 ರೂ. ಲಾಭ ಮಾಡುತ್ತಿದ್ದಾರೆ. ಶೇ.60 ರಷ್ಟು ತೆರಿಗೆ ಪೆಟ್ರೋಲ್, ಡೀಸೆಲ್ ಮೇಲೆ ಹಾಕಿದ್ದಾರೆ ಎಂದರು.