ಬೆಂಗಳೂರು: ಪ್ರತಿ ಕುಟುಂಬಕ್ಕೆ ತಿಂಗಳಿಗೊಂದು ಎಲ್ಪಿಜಿ ಸಿಲಿಂಡರ್ ವಿತರಿಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಅಡುಗೆ ಅನಿಲ ಸಮಸ್ಯೆ ಕುರಿತಾಗಿ ಕಾಂಗ್ರೆಸ್ ಸದಸ್ಯೆ ಹೆಚ್.ಡಿ. ರಂಗನಾಥ್ ಪ್ರಸ್ತಾಪಿಸಿ ನಡೆದ ಚರ್ಚೆಯ ನಂತರ ಸಚಿವರು ಉತ್ತರ ನೀಡಿದ್ದಾರೆ. ಇಸ್ರೇಲ್ –ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದಿಂದ ರಾಜ್ಯದಲ್ಲಿ ಅಡುಗೆ ಅನಿಲ ಕೊರತೆ ನಿರ್ಮಾಣವಾಗಿದೆ. ಆದರೂ ಪ್ರತಿ ತಿಂಗಳು ಒಂದು ಕುಟುಂಬಕ್ಕೆ ಒಂದು ಎಲ್.ಪಿ.ಜಿ. ಸಿಲಿಂಡರ್ ಪೂರೈಸುತ್ತೇವೆ. ದೇಶ ಸಂಕಷ್ಟದಲ್ಲಿರುವಾಗ ಜನ ಸಹಕರಿಸಬೇಕು ಎಂದು ಹೇಳಿದ್ದಾರೆ.
ಅಗತ್ಯವಿರುವ ಎಲ್ಪಿಜಿಯಲ್ಲಿ ಶೇಕಡ 70ರಷ್ಟು ವಿದೇಶದಿಂದಲೇ ಬರಬೇಕಿದೆ. ಯುದ್ಧದ ಕಾರಣದಿಂದ ಕಚ್ಚಾ ತೈಲ ಮತ್ತು ಎಲ್.ಪಿ.ಜಿ. ದೇಶಕ್ಕೆ ಬರುತ್ತಿಲ್ಲ. ಉಳಿದಂತೆ ಶೇಕಡ 30ರಷ್ಟು ಎಲ್ಪಿಜಿ ಉತ್ಪಾದನೆ ನಮ್ಮ ದೇಶದಲ್ಲಿ ಆಗುತ್ತಿದೆ. ಆ ಎಲ್ಪಿಜೆಯಿಂದ ಗೃಹ ಬಳಕೆಗೆ ಸಮಸ್ಯೆಗೆ ಆಗದಂತೆ ಪೂರೈಕೆ ಮಾಡಬಹುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
14 ಕೆಜಿ ಸಿಲಿಂಡರ್ ನಾಲ್ಕೈದು ಮಂದಿ ಸದಸ್ಯರಿರುವ ಕುಟುಂಬಕ್ಕೆ 25 ದಿನಕ್ಕಿಂತಲೂ ಹೆಚ್ಚು ಕಾಲ ಬರುತ್ತದೆ. ಈ ಅಂದಾಜಿನಲ್ಲಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದು ಸಿಲಿಂಡರ್ ಪೂರೈಸುತ್ತೇವೆ. ಮಿತವ್ಯಯಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.






























