ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ನಲ್ಲಿ ನಿನ್ನೆ ರಾತ್ರಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಮೂವರು ಸೈನಿಕರು ಗಾಯಗೊಂಡಿದ್ದು, ಇದರೊಂದಿಗೆ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿರುವ ಆಪರೇಷನ್ನಲ್ಲಿ ಗಾಯಗೊಂಡ ಸೈನಿಕರ ಸಂಖ್ಯೆ ಹತ್ತಕ್ಕೇರಿದೆ.
ಶುಕ್ರವಾರ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಮಡಿದ ವೀರ ಯೋಧರನ್ನು ಕೆ.ಪ್ರೀತ್ಪಾಲ್ ಸಿಂಗ್ ಮತ್ತು ಹರ್ಮಿಂದರ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರ ಈ ತ್ಯಾಗಕ್ಕೆ ಅವರನ್ನು ಚಿನಾರ್ ಕಾರ್ಪ್ಸ್ ಗೌರವಿಸುತ್ತದೆ. ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ ಎಂದು ಭಾರತೀಯ ಸೇನೆ ಎಕ್ಸ್ ಮೂಲಕ ಸಂತಾಪ ಸೂಚಿಸಿದೆ.
ಆಪರೇಷನ್ ಅಖಾಲ್ನಲ್ಲಿ ಈಗಾಗಲೇ ಆರು ಭಯೋತ್ಪಾದಕರನ್ನು ಸಾಯಿಸಲಾಗಿದೆ. ಇನ್ನೂ ಕೆಲವು ಭಯೋತ್ಪಾದಕರು ಈ ದಟ್ಟ ಗುಡ್ಡಗಾಡು ಪ್ರದೇಶಗಳಲ್ಲಿರುವ ಗುಹೆಗಳಲ್ಲಿ ಅವಿತುಕೊಂಡಿದ್ದು, ಅವರನ್ನು ನಿಗ್ರಹಿಸಲು ಕಾರ್ಯಾಚರಣೆ ಮುಂದುವರಿದೆ.ಭಯೋತ್ಪಾದಕರನ್ನು ಪತ್ತೆ ಮಾಡಿ ಮಟ್ಟ ಹಾಕುವ ಕಾರ್ಯಚರಣೆ ಮುಂದುವರಿದಿದೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್ನಲ್ಲಿ ತಿಳಿಸಿದೆ. ಆಗಸ್ಟ್ 1ರಿಂದ ಆಪರೇಷನ್ ಅಖಾಲ್ ಶುರುವಾಗಿದ್ದು, ಇಂದು ಒಂಬತ್ತನೇ ದಿನ ಕಾರ್ಯಚರಣೆ ನಡೆದಿದೆ ಎಂದು ಸೇನೆ ಹೇಳಿದೆ.