ನವದೆಹಲಿ : ಆಪರೇಷನ್ ಸಿಂಧೂರ್’ ಎಂಬ ಹೆಸರಿನ ಬೆಳಗಿನ ಜಾವದ ಮುನ್ನ ನಡೆಸಿದ ದಾಳಿಯಲ್ಲಿ, ಭಾರತವು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದಾದ್ಯಂತ ಒಂಬತ್ತು ಪ್ರಮುಖ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ಬುಧವಾರ ಮಾಧ್ಯಮಗಳಿಗೆ ಮಾಹಿತಿ ಬಹಿರಂಗಪಡಿಸಿದರು.
ಭಾರತೀಯ ಮೂರು ಸೇನಾ ಪಡೆಗಳು ಸೇರಿ ಪಾಕಿಸ್ತಾನದಲ್ಲಿ ನಡೆಸಿದ ವೈಮಾನಿಕ ದಾಳಿ ಕುರಿತು ಸೇನಾಧಿಕಾರಿಗಳು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಹಿಂದೂ ಹೆಣ್ಣುಮಕ್ಕಳ ಕುಂಕುಮ ಅಳಿಸಿದವರಿಗೆ ತಕ್ಕ ಶಾಸ್ತಿಯಾಗಿದೆ. ಪಾಕಿಸ್ತಾನದೊಳಗೆ ನುಗ್ಗಿ ಹೊಡೆದಿದ್ದೇವೆ ಎಂದು ಕರ್ನಲ್ ಸೋಫಿಯಾ ಖುರೇಷಿ ಮಾಹಿತಿ ನೀಡಿದ್ದಾರೆ.ಕಾರ್ಯಾಚರಣೆ ಬೆಳಗಿನ ಜಾವ 1.05ರಿಂದ 1.30ರವರೆಗೆ ನಡೆಯಿತು. ಕಳೆದ 3 ದಶಕಗಳಿಂದ ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಸೃಷ್ಟಿಸಲಾಗುತ್ತಿದೆ. ಪಾಕಿಸ್ತಾನ ಮತ್ತು ಪಿಒಕೆಯಲ್ಲಿ 9 ಗುರಿಗಳನ್ನು ಗುರುತಿಸಲಾಯಿತು ಮತ್ತು ನಾವು ಅವುಗಳನ್ನು ನಾಶಪಡಿಸಿದ್ದೇವೆ. ಲಾಂಚ್‌ಪ್ಯಾಡ್‌ಗಳು ಮತ್ತು ತರಬೇತಿ ಕೇಂದ್ರಗಳನ್ನು ಗುರಿಯಾಗಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ನಾವು ಯಾವುದೇ ನಾಗರಿಕರ ಮೇಲಾಗಲಿ ಅಥವಾ ಪಾಕ್ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ, ಕೇವಲ ಉಗ್ರರ ನೆಲೆಗಳನ್ನು ಮಾತ್ರ ಧ್ವಂಸಗೊಳಿಸಿದ್ದೇವೆ ಎಂದು ಖುರೇಷಿ ಸ್ಪಷ್ಟಪಡಿಸಿದ್ದಾರೆ.ನಾಗರಿಕರಿಗೆ ಹಾನಿ ಮಾಡುವುದು ನಮ್ಮ ಉದ್ದೇಶವಲ್ಲ. ಭಾರತೀಯ ಸೇನೆ ನಡೆಸಿದ ನಿಖರವಾದ ಕಾರ್ಯಾಚರಣೆಯಲ್ಲಿ ಗುರಿಗಳಲ್ಲಿ ಬಹಾವಲ್ಪುರದ ಮರ್ಕಜ್ ಸುಭಾನ್ ಅಲ್ಲಾ, ತೆಹ್ರಾ ಕಲಾನ್‌ನಲ್ಲಿರುವ ಸರ್ಜಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಶಿಬಿರ (ಎಲ್ಲವೂ ನಿಷೇಧಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪು) ಸೇರಿವೆ.
ಮುರ್ಡಿಕೆಯಲ್ಲಿರುವ ಮರ್ಕಜ್ ತೈಬಾ, ಬರ್ನಾಲಾದಲ್ಲಿರುವ ಮರ್ಕಜ್ ಅಹ್ಲೆ ಹದೀಸ್ ಮತ್ತು ಮುಜಫರಾಬಾದ್‌ನ ಶ್ವಾವೈ ನಲ್ಲ ಶಿಬಿರ (ಎಲ್ಲವೂ ನಿಷೇಧಿತ ಲಷ್ಕರ್-ಎ-ತೈಬಾದವು) ಮತ್ತು ಕೋಟ್ಲಿಯಲ್ಲಿರುವ ಮಕಾಜ್ ರಹೀಲ್ ಶಾಹಿದ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ಮೆಹಮೂನಾ ಜೋಯಾ (ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್‌ನ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳು) ಗುರಿಯಾಗಿಸಿಕೊಂಡಿವೆ. ಭಾರತ ಆಯ್ಕೆ ಮಾಡಿದ ಒಂಬತ್ತು ಸ್ಥಳಗಳಲ್ಲಿ ನಾಲ್ಕು ಪಾಕಿಸ್ತಾನದಲ್ಲಿವೆ ಮತ್ತು ಉಳಿದ ಐದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿವೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ನಾಗರಿಕರನ್ನು ಹತ್ಯೆ ಮಾಡಿದ ಎರಡು ವಾರಗಳ ನಂತರ ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಯಿತು.