ಮುಂಬೈ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿದ್ದು, ಇದಕ್ಕೆ ದೇಶದೆಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ‘ಆಪರೇಷನ್ ಸಿಂಧೂರ’ ಟೈಟಲ್ ನೋಂದಣಿ ಮಾಡಲು ಬಾಲಿವುಡ್ ನಿರ್ಮಾಪಕರು ಮುಗಿಬಿದ್ದಿರುವುದಾಗಿ ವರದಿಯಾಗಿದೆ.
ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುತ್ತಿದೆ. ಈ ಮಧ್ಯೆ ‘ಆಪರೇಷನ್ ಸಿಂಧೂರ’ ಟೈಟಲ್ ನೋಂದಣಿಗೆ ಪೈಪೋಟಿ ಶುರುವಾಗಿದೆ. ಈಗಾಗಲೇ ಭಾರತ ಸೇನೆಗೆ ಸಂಬಂಧಿಸಿದ ಉರಿ, ಬಾರ್ಡರ್ ಸೇರಿದಂತೆ ಅನೇಕ ಸಿನಿಮಾಗಳು ಬಿಡುಗಡೆಯಾಗಿವೆ. ಈ ಸಿನಿಮಾಗಳಂತೆಯೇ ‘ಆಪರೇಷನ್ ಸಿಂಧೂರ’ ಕುರಿತ ನೈಜ ಕಥೆ ಆಧಾರಿತ ಸಿನಿಮಾ ಮಾಡಲು ನಿರ್ಮಾಪಕರು ಆಲೋಚಿಸಿದ್ದಾರೆ.
ಈಗಾಗಲೇ 15ಕ್ಕೂ ಹೆಚ್ಚು ಖ್ಯಾತ ನಿರ್ಮಾಣ ಸಂಸ್ಥೆಗಳು ಆಪರೇಷನ್ ಸಿಂಧೂರ ಟೈಟಲ್ ಅನ್ನು ನೋಂದಣಿ ಮಾಡಲು ಮುಂದಾಗಿದೆ ಎಂದು ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿ ಅಧ್ಯಕ್ಷ ಬಿಎನ್ ತಿವಾರಿ ತಿಳಿಸಿದ್ದಾರೆ. ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್‌ನಲ್ಲಿ ಈ ಟೈಟಲ್‌ಗಾಗಿ ನೋಂದಣಿಯನ್ನು ಮಾಡಿಸಿವೆ. ಆದರೆ, ಟೈಟಲ್ ಯಾರ ಪಾಲಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ ಎಂದು ವರದಿಗಳು ತಿಳಿಸಿವೆ.