ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಆರಂಭಿಸಿದೆ. ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಲಾಗಿದೆ.
ಆಪರೇಷನ್ ಸಿಂಧೂರ್ ಅನ್ನು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ ಜಂಟಿಯಾಗಿ ನಡೆಸಿವೆ. ಐಎಎಫ್ ಫೈಟರ್ ಜೆಟ್‌ಗಳು ವೈಮಾನಿಕ ದಾಳಿ ನಡೆಸಿದರೆ, ಸೇನೆಯು ಕ್ಷಿಪಣಿಗಳನ್ನು ಉಡಾಯಿಸಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ದಾಳಿಯಲ್ಲಿ ಸುಮಾರು 70ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಏಪ್ರಿಲ್ 22 ರಂದು ಪಾಕ್ ಬೆಂಬಲಿತ ಉಗ್ರರು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಪೈಶಾಚಿಕ ಕೃತ್ಯ ನಡೆಸಿದ್ದರು. ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಜೀವ ಕಳೆದುಕೊಂಡಿದ್ದರು. ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿತ್ತು
ಹೆಣ್ಮಕ್ಕಳ ಸಿಂಧೂರ ಅಳಿಸಿದ ಪ್ರತೀಕಾರವೇ ‘ಆಪರೇಷನ್ ಸಿಂಧೂರ..
ಅಮಾಯಕ ಹಿಂದೂಗಳ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ಪೈಶಾಚಿಕ ದಾಳಿ ಎಷ್ಟು ಕ್ರೂರ ಮತ್ತು ಘೋರವಾಗಿತ್ತು ಅಂದರೆ, ಪ್ರವಾಸಿಗರನ್ನು ಕೊಲ್ಲುವ ಮುನ್ನ ಧರ್ಮ ಯಾವುದು ಎಂದು ಕೇಳಿದ್ದರು. ಅನುಮಾನ ಬಂದವರ ಪ್ಯಾಂಟ್ ಬಿಚ್ಚಿಸಿ ನಂತರ ಹಣೆಗೆ ಗುಂಡಿಟ್ಟು ರಾಕ್ಷಸೀ ಕೃತ್ಯ ನಡೆಸಿದ್ದರು. ಉಗ್ರರ ಘೋರ ಕೃತ್ಯಕ್ಕೆ ಪತ್ನಿ ಹಾಗೂ ಮಕ್ಕಳ ಎದುರಲ್ಲೇ 26 ಮಂದಿ ಉಸಿರು ಚೆಲ್ಲಿದ್ದರು. ಉಗ್ರರ ಹೇಯ ಕೃತ್ಯದಿಂದ 26 ಹೆಣ್ಮಕ್ಕಳು ತಮ್ಮ ಸಿಂಧೂರವನ್ನು ಕಳೆದುಕೊಂಡು ಕಣ್ಣೀರಾಗಿ ಪತಿಯ ಶವದ ಮುಂದೆ ಕೂತಿದ್ದರು.
ಉಗ್ರ ಪೋಷಕ ಪಾಕಿಸ್ತಾನದ ವಿರುದ್ಧವೂ ಸೇಡು ತೀರಿಸಿಕೊಳ್ಳುವ ಭರವಸೆ ನೀಡಿತ್ತು. ಅದರಂತೆ ಇಂದು ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದೆ. ಸಿಂಧೂರ ಅಳಿಸಿದ, ಉಗ್ರರು ಮತ್ತು ಪಾಕ್ ವಿರುದ್ಧ ಕೈಗೊಂಡ ಅತೀ ದೊಡ್ಡ ಮಿಲಿಟರಿ ಕಾರ್ಯಾಚರಣೆಯೇ ಈ ‘ಆಪರೇಷನ್ ಸಿಂಧೂರ್’ ಆಗಿದೆ.