ರಾಜ್ಯದಲ್ಲಿ ಜನ ಮೆಚ್ಚುಗೆಗೆ ಪಾತ್ರವಾಗಿರುವ ರಿಯಾಲಿಟಿ ಶೋ ಬಿಗ್ ಬಾಸ್ ಫಿನಾಲೆಗೆ ಕೆಲ ದಿನಗಳಷ್ಟೇ ಬಾಕಿ ಇರುವ ಸಂದರ್ಭವೇ ಬಿಗ್ ಬಾಸ್ ಕನ್ನಡ ತಂಡಕ್ಕೆ ದೊಡ್ಡ ಶಾಕ್ ಎದುರಾಗಿದೆ. ಈ ಕೂಡಲೇ ಶೋವನ್ನು ನಿಲ್ಲಿಸುವಂತೆ ಸೂಚನೆ ಬಂದಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಮಾಳಿಗೊಂಡನಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಕಾರ್ಯಕ್ರಮವನ್ನು ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ, ಕಾರ್ಮಿಕ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದೆ ನಡೆಸಲಾಗುತ್ತಿದೆ ಎಂದು ರಾಘವೇಂದ್ರ ಆಚಾರ್ ಎಂಬುವವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ದೂರಿನ ಬೆನ್ನಲ್ಲೇ ಬಿಗ್ ಬಾಸ್ ನಡೆಯುತ್ತಿರುವ ಮಾಳಿಗೊಂಡನಹಳ್ಳಿ ಸರ್ವೆ ನಂ.128/1ರ ವಾಣಿಜ್ಯ ವ್ಯಾಪಾರ ವಸತಿಯೇತರ ವ್ಯವಹಾರದ ಲೈಸೆನ್ಸ್ ರದ್ದು ಮಾಡಿ, ಶೋ ಸ್ಥಗಿತಗೊಳಿಸಿ ಕ್ರಮ ಕೈಗೊಳ್ಳುವಂತೆ ಜಿ.ಪಂ ಸಿಇಒ ಲತಾ ಕುಮಾರಿ ಸೂಚನೆ ನೀಡಿದ್ದಾರೆ. ಅದರಂತೆ ರಾಮೋಹಳ್ಳಿ ಪಿಡಿಒ, ಜಮೀನು ಮಾಲೀಕ ಪಡೆದಿದ್ದ ವಾಣಿಜ್ಯ ಪ್ಯಾಪಾರ ವಸತಿಯೇತರ ವ್ಯವಹಾರದ ಲೈಸೆನ್ಸ್ ಅನ್ನು ರದ್ದು ಮಾಡಿದ್ದು ರಿಯಾಲಿಟಿ ಶೋ ಅನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ.