ಬೆಂಗಳೂರು ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರ ಬಿಸಿ ರೈಲ್ವೆ ಜಾಲಕ್ಕೂ ತಟ್ಟಿದೆ. ಸಿಟಿ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಪಾರಂಗಳು ಸಾಕಾಗುತ್ತಿಲ್ಲ. ಹೀಗಾಗಿ ದೂರದೃಷ್ಟಿ ಇಟ್ಟುಕೊಂಡು, ನಗರ ಹೊರವಲಯದ ದೇವನಹಳ್ಳಿಯ ಐದು ಗ್ರಾಮಗಳ ಜಮೀನಿನಲ್ಲಿ ಬೃಹತ್ ರೈಲ್ವೆ ಟರ್ಮಿನಲ್ ನಿರ್ಮಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇದರಿಂದ ರೈತರಿಗೆ ಆತಂಕ ಎದುರಾಗಿದೆ. ಇದಕ್ಕೆ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.
ರೈಲ್ವೆ ಮೆಗಾ ಸಬ್ ಅರ್ಬನ್ ಯೋಜನೆಗೆ ಪ್ಲ್ಯಾನ್ ರೂಪಿಸಲಾಗುತ್ತಿದೆ ಎನ್ನಲಾಗಿದ್ದು, ಇದರಿಂದ ಜೀವನಾಧಾರದ ನೆಲ ಕಳೆದುಕೊಳ್ಳುವ ಭೀತಿ ರೈತರಿಗೆ ಎದುರಾಗಿದೆ. ಭೂ ಸ್ವಾಧೀನ ಸರ್ವೆ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಪ್ರಾಣಬಿಟ್ಟರೂ ಭೂಮಿ ಬಿಡಲ್ಲ ಎಂದು 5 ಗ್ರಾಮಗಳ ಜನರು ಪಟ್ಟುಹಿಡಿದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನಲ್ಲಿ ಮೆಗಾ ಟರ್ಮಿನಲ್ ಸ್ಥಾಪನೆಗೆ ಸರ್ಕಾರ ಸಜ್ಜಾಗಿದೆ. ಮೆಗಾ ಟರ್ಮಿನಲ್ ಮತ್ತು ಸಬ್ ಅರ್ಬನ್ ರೈಲ್ವೆಗಾಗಿ ಸರ್ವೆ ಕಾರ್ಯ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಇದಕ್ಕಾಗಿ ಆವತಿ ಸೇರಿದಂತೆ ಐದು ಗ್ರಾಮಗಳ ಸಾವಿರಾರು ಕೃಷಿ ಜಮೀನಿನಲ್ಲಿ ಸರ್ವೆ ಮಾಡಲಾಗಿದೆ ಎಂದು ಈ ಭಾಗದ ರೈತರು ಗರಂ ಆಗಿದ್ದಾರೆ. ನಮ್ಮ ಜಾಗ ನೀಡಲ್ಲ ಎಂದು ರೈತರು ಹೇಳಿದ್ದಾರೆ. ಆವತಿಯಲ್ಲಿ ಐದು ಗ್ರಾಮಗಳ ಜನರು ಭಾನುವಾರ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಭೂಮಿ ನೀಡುವುದಿಲ್ಲ ಎಂದಿದ್ದಾರೆ. ಅಲ್ಲದೆ, ಉಗ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಅಂದಹಾಗೆ ಆವತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕೃಷಿ ಭೂಮಿ ಇದೆ. ಜೊತೆಗೆ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಇಲ್ಲಿಯೇ ಹುಟ್ಟಿದ್ದರು ಎಂಬ ಐತಿಹ್ಯವೂ ಇದೆ. ಇಲ್ಲಿನ ಜಮೀನು ಸ್ವಾಧೀನಪಡಿಸಿಕೊಂಡು 40 ಪ್ಲಾಟ್ಫಾರಂ, ಸುಸಜ್ಜಿತ ಹಳಿಗಳನ್ನು ಒಳಗೊಂಡ ಟರ್ಮಿನಲ್ ಮಾಡಿ ಬೆಂಗಳೂರು ನಗರದಲ್ಲಿ ಹೆಚ್ಚಾದ ರೈಲ್ವೆ ದಟ್ಟಣೆ ಕಡಿಮೆ ಮಾಡಲು ಸರ್ಕಾರ ಮುಂದಾಗಿಯಂತೆ. ಇದಕ್ಕೆ ಆರಂಭದಲ್ಲೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಸಬ್ ಅರ್ಬನ್ ಹಾಗೂ ಟರ್ಮಿನಲ್ಗಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನಕ್ಕೆ ಸರ್ಕಾರ ಸರ್ವೆ ಕಾರ್ಯ ನಡೆಸಿದೆ ಎನ್ನಲಾಗಿದ್ದು, ಭೂ ಸ್ವಾಧೀನಕ್ಕೆ ಅಧಿಕಾರಿಗಳು ಬಂದರೆ ಇದರ ವಿರುದ್ಧ ಹೋರಾಟ ನಡೆಸಲು ಗ್ರಾಮಸ್ಥರು ಸಜ್ಜಾಗಿರುವುದಂತೂ ನಿಜ. ಸದ್ಯ ಗ್ರಾಮಸ್ಥರು ಸಭೆ ನಡೆಸಿ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂದೆ ಇದು ಯಾವ ರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.