ನವದೆಹಲಿ : ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್ ಷರೀಫ್‌ಗೆ ಅಲ್ಲಿನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ನೀಡಿದ ಫೋಟೊ ಇಡೀ ಜಗತ್ತಿನಲ್ಲಿ ನಗೆಪಾಟಲಾಗಿದೆ. ಚೀನದ 2019ರ ಮಿಲಿಟರಿ ಡ್ರಿಲ್‌ನ ಫೋಟೊವನ್ನು ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಸಿಕ್ಕಿದ ಗೆಲುವು ಎಂದು ಹೇಳಿಕೊಂಡು ಸನ್ಮಾನ ಸಮಾರಂಭದಲ್ಲಿ ಮುನೀರ್ ಈ ಫೋಟೊವನ್ನು ಪ್ರಧಾನಿಗೆ ಉಡುಗೊರೆ ನೀಡಿದ್ದರು. ಕ್ಷಣಾರ್ಧದಲ್ಲಿ ಈ ಫೋಟೊದ ಅಸಲಿ ಮೂಲ ಪತ್ತೆಯಾಗಿದ್ದು, ಪಾಕಿಸ್ತಾನದ ಸೇನೆ ಇನ್ನಿಲ್ಲದಂತೆ ಅಪಹಾಸ್ಯಕ್ಕೆ ಗುರಿಯಾಗಿದೆ.
ಇದೇ ವಿಚಾರವಾಗಿ ಕುವೈಟ್‌ನಲ್ಲಿ ಮಾತನಾಡಿರುವ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ʼನಕಲ್ ಕರ್ನೆ ಕೆ ಲಿಯೆ ಅಕಲ್ ಚಾಹಿಯೆ ಇನ್ ಕೆ ಪಾಸ್ ಅಕಲ್ ಭಿ ನಹೀ ಹೇʼʼ ಎಂದು ಪಾಕಿಸ್ತಾನವನ್ನು ಲೇವಡಿ ಮಾಡಿದ್ದಾರೆ. ಪಾಕಿಸ್ತಾನದ ಉಗ್ರವಾದದ ಮುಖವನ್ನು ಜಗತ್ತಿಗೆ ತಿಳಿಸಲು ಹೋಗಿರುವ ನಿಯೋಗದಲ್ಲಿರುವ ಓವೈಸಿ ವಿದೇಶ ನೆಲದಲ್ಲೇ ಪಾಕಿಸ್ತಾನದ ಬಣ್ಣಬಯಲು ಮಾಡಿದ್ದಾರೆ.
ಕುವೈಟ್‌ನ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಓವೈಸಿ ಚೀನದ ಹಳೆಯ ಫೊಟೊವನ್ನು ತನ್ನ ಗೆಲುವಿನ ಸಂಕೇತ ಎಂದು ಬಿಂಬಿಸಲು ಯತ್ನಿಸಿದ ಪಾಕಿಸ್ತಾನದ ಬೋಳೇತನವನ್ನು ಇನ್ನಿಲ್ಲದಂತೆ ಲೇವಡಿ ಮಾಡಿದ್ದಾರೆ. 2019ರ ಚೀನದ ಮಿಲಿಟರಿ ಡ್ರಿಲ್‌ನ ಫೋಟೊ ಎಡಿಟ್ ಮಾಡಿ ಪ್ರಧಾನಿಗೇ ಉಡುಗೊರೆ ಕೊಟ್ಟು ಇದು ಭಾರತದ ವಿರುದ್ಧ ನಾವು ಹಾರಿಸಿದ ಕ್ಷಿಪಣಿಗಳು ಎಂದು ಅಲ್ಲಿನ ಸೇನಾ ಮುಖ್ಯಸ್ಥ ಹೇಳಿಕೊಂಡಿದ್ದಾರೆ. ಇದು ಪಾಕಿಸ್ತಾನದ ನಿಜವಾದ ಯೋಗ್ಯತೆ ಎಂದು ಓವೈಸಿ ಲೇವಡಿ ಮಾಡಿದ್ದಾರೆ.