ದಾವಣಗೆರೆ : ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಬಿಳಿ ಜೋಳವನ್ನು ರೈತರಿಂದ ಖರೀದಿಸಲು ಅವಕಾಶ ಕಲ್ಪಿಸಿದೆ. ಅದರಂತೆ ಜಿಲ್ಲಾ ವ್ಯಾಪ್ತಿಯಲ್ಲಿನ ಬಿತ್ತನೆ ಪ್ರಮಾಣ ಆಧರಿಸಿ ಭತ್ತ ಕ್ವಿಂಟಾಲ್‍ಗೆ ರೂ.2300 ಹಾಗೂ ಭತ್ತ ಗ್ರೇಡ್‍ಎ ರೂ.2320 ಗಳಂತೆ ಮತ್ತು ಹೈಬ್ರಿಡ್ ಜೋಳವನ್ನು ಪ್ರತಿ ಕ್ವಿಂಟಾಲ್‍ಗೆ ರೂ.3371/- ಹಾಗೂ ಮಾಲ್ದಂಡಿ ಜೋಳವನ್ನು ಕ್ವಿಂಟಾಲ್‍ಗೆ ರೂ. 3421/- ನಂತೆ ಯಾವುದೇ ವ್ಯತ್ಯಾಸಗಳಿಗೆ ಅವಕಾಶ ನೀಡದೆ ನೊಂದಣಿ ಮತ್ತು ಖರೀದಿಗೆ ಕ್ರಮವಹಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
ಪ್ರಸಕ್ತ ಸಾಲಿನ ಹಿಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಮತ್ತು ಬಿಳಿಜೋಳ ಖರೀದಿಸಲು ಮಾರ್ಚ್ 15 ರಿಂದ ನೊಂದಣಿ ಪ್ರಕ್ರಿಯ ಪ್ರಾರಂಭಿಸಲಾಗಿದ್ದು, ಮೇ 31 ರವರೆಗೆ ನೊಂದಣಿ ಮತ್ತು ಖರೀದಿ ಪ್ರಕ್ರಿಯೆ ನಡೆಯಲಿದೆ. ಖರೀದಿ ಕೇಂದ್ರಗಳನ್ನು ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಆರಂಭಿಸಲಾಗಿದೆ.
ರೈತರಿಂದ ಸಂಪೂರ್ಣ ಒಣಗಿದ ಹಾಗೂ ಎಫ್‍ಎಕ್ಯೂ ಗುಣಮಟ್ಟದ ಭತ್ತ ಮತ್ತು ಬಿಳಿಜೋಳ ಮಾದರಿಯನ್ನು ಪಡೆದು ನಿಗಧಿಪಡಿಸಿದ ಮಾನದಂಡಗಳಂತೆ ಗ್ರೇಡರ್ ಅಥವಾ ಆಸೇಯರ್‍ಗಳಿಂದ ದೃಢೀಕರಿಸಿದ ಗುಣಮಟ್ಟದ ಬಿಳಿ ಜೋಳವನ್ನು ಮಾತ್ರ ಖರೀದಿಸಲಾಗುತ್ತದೆ. ರೈತರ ಫ್ರೂಟ್ಸ್ ಐಡಿ ನೊಂದಣಿ ಕಡ್ಡಾಯವಾಗಿರುತ್ತದೆ. ರೈತರಿಂದ ಕನಿಷ್ಠ ಬೆಂಬಲ ಬೆಲೆಗೆ ಜೋಳ ಖರೀದಿಸಲಾಗುವುದು. ಪ್ರತಿ ರೈತರಿಂದ ಎಕರೆಗೆ 20 ಕ್ವಿಂಟಾಲ್‍ನಂತೆ ಗರಿಷ್ಠ 150 ಕ್ವಿಂಟಾಲ್ ಜೋಳ ಹಾಗೂ ಭತ್ತವನ್ನು ಎಕರೆಗೆ ಕನಿಷ್ಠ 25 ರಿಂದ ಗರಿಷ್ಠ 50 ಕ್ವಿಂಟಾಲ್‍ವರೆಗೆ ಖರೀದಿಸಲಾಗುವುದು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮರಿಹಾಳ್, ಆಹಾರ ನಿಗಮದ ಅಧಿಕಾರಿ ಶೃತಿ ಹಾಗೂ ಎಪಿಎಂಸಿ ಅಧಿಕಾರಿಗಳು ಉಪಸ್ಥಿತರಿದ್ದರು