ನವದೆಹಲಿ :ರಾಷ್ಟ್ರಪತಿ ಭವನದಲ್ಲಿ ಸೋಮವಾರ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ತೊಗಲು ಗೊಂಬೆ ಕಲಾವಿದೆ ಭೀಮವ್ವ ಶಿಳ್ಳೆಕ್ಯಾತರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಪದ್ಮಶ್ರೀ ಪ್ರದಾನ ಮಾಡಲಾಯಿತು.ಬಾಲ್ಯದಲ್ಲಿ ಅಪ್ಪ, ಮದುವೆಯ ನಂತರ ಪತಿ ಹಾಗೂ ಮಕ್ಕಳು, ಮೊಮ್ಮಕ್ಕಳೊಂದಿಗೆ ಕಲಿತ ತೊಗಲು ಗೊಂಬೆಯಾಟವನ್ನು 103 ವರ್ಷವಾದರೂ ತನ್ನ ಜೀವನಕ್ಕೆ ಆಧಾರವಾಗಿಸಿಕೊಂಡು, ಅದನ್ನೇ ಉಸಿರಾಗಿಸಿಕೊಂಡಿರುವ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಭೀಮವ್ವ ಶಿಳ್ಳೆಕ್ಯಾತರ್ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
103 ವರ್ಷವಾದರೂ ಸರಾಗವಾಗಿ ಹಾಡುತ್ತಿರುವ ಪದ್ಮಶ್ರೀ ಪುರಸ್ಕೃತೆ ಭೀಮವ್ವ ಅಜ್ಜಿ, ತೊಗಲು ಗೊಂಬೆಯಾಟದ ಕಲೆಯನ್ನು ನಶಿಸಿ ಹೋಗದಂತೆ ಕಾಪಾಡಿಕೊಂಡು ಬಂದಿದ್ದಾರೆ.
ಕಳೆದ 82 ವರ್ಷಗಳಿಂದ ತೊಗಲು ಗೊಂಬೆಯಾಟದಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಕೇಂದ್ರ ಸರ್ಕಾರದ ಮೂರನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವುದು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದೆ.