ಶ್ರೀನಗರ: ಪಹಲ್ಗಾಮ್‌ನಲ್ಲಿ ಅಮಾಯಕ ಪ್ರವಾಸಿಗರನ್ನು ಗುಂಡಿಕ್ಕಿ ಸಾಯಿಸಿದ ಉಗ್ರರಿಗೆ ಊಟ ಮತ್ತು ಆಶ್ರಯ ನೀಡಿದ ಸ್ಥಳೀಯ ಯುವಕನೊಬ್ಬ ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಮುಳುಗಿ ಮೃತಪಟ್ಟಿದ್ದಾನೆ. ಆದರೆ ಈ ಯುವಕನ ತಾಯಿ ಇದು ಪೊಲೀಸರು ಮತ್ತು ಭದ್ರತಾ ಪಡೆಯವರು ಉದ್ದೇಶಪೂರ್ವಕವಾಗಿ ನಡೆಸಿದ ಕೊಲೆ ಎಂದು ಅರೋಪಿಸಿ ಮಾಧ್ಯಮಗಳ ಮುಂದೆ ಗೋಳಾಡಿದ್ದಾರೆ.
ಇಮ್ತಿಯಾಜ್ ಅಹ್ಮದ್ ಮಾಗ್ರೆ ಎಂಬ 23 ವರ್ಷದ ಯುವಕ ಪಹಲ್ಗಾಮ್ ದಾಳಿಕೋರರಿಗೆ ಸಕಲ ನೆರವು ನೀಡುತ್ತಿದ್ದ ಎಂದು ಮೂಲಗಳು ಖಚಿತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇಮ್ತಿಯಾಜ್ ಅಹ್ಮದ್ ಮಾಗ್ರೆನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಇಮ್ತಿಯಾಜ್ ತಾನು ಕಾಡಿನಲ್ಲಿ ಅಡಗಿದ್ದ ಭಯೋತ್ಪಾದಕರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದ.
ಪೊಲೀಸರು ಭಾನುವಾರ ಇಮ್ತಿಯಾಜ್‌ನನ್ನು ಭಯೋತ್ಪಾದಕರು ಅಡಗಿದ್ದ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದಾಗ ಆತ ತಪ್ಪಿಸಿಕೊಳ್ಳಲು ಯತ್ನಿಸಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ್ದಾನೆ. ಆದರೆ ತುಂಬ ದೂರ ಈಜಲಾಗದೆ ಮುಳುಗಿ ಮೃತಪಟ್ಟಿದ್ದಾನೆಂದು ಭದ್ರತಾ ಪಡೆಗಳು ತಿಳಿಸಿವೆ. ನದಿಗೆ ಹಾರಿ ಮುಳುಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎತ್ತರದ ಪ್ರದೇಶದಿಂದ ಸೆರೆಹಿಡಿಯಲಾದ ವೀಡಿಯೊದಲ್ಲಿ, ಆರೋಪಿ ನದಿಗೆ ಹಾರುವ ಮೊದಲು ಅರಣ್ಯ ಪ್ರದೇಶವನ್ನು ಗಮನಿಸುತ್ತಿರುವುದು, ನದಿಗೆ ಹಾರಿದ ತಕ್ಷಣ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿರುವುದು ಕಂಡು ಬಂದಿದೆ. ಈಗ ಘಟನೆ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ತನಿಖೆಗೆ ಒತ್ತಾಯಗಳೂ ಕೇಳಿ ಬರುತ್ತಿವೆ.


































