ಶ್ರೀನಗರ :ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ತನಿಖೆಯ ಹೊಣೆಯನ್ನು ಕೇಂದ್ರ ಗೃಹಸಚಿವಾಲಯ ಎನ್ಐಎ ಹೆಗಲಿಗೆ ವಹಿಸಿದೆ.ಈ ದಾಳಿಯ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ಅಧಿಕೃತವಾಗಿ ತನಿಖೆ ಶುರುಮಾಡಲಿದೆ ಎಂದು ವರದಿಗಳು ತಿಳಿಸಿವೆ.
ಮೂಲಗಳ ಪ್ರಕಾರ, ತನಿಖೆಗೆ ನಿಯೋಜಿಲ್ಪಟ್ಟ ಎನ್ಐಎ ತಂಡ ಈಗಾಗಲೇ ಪಹಲ್ಗಾಮ್ ತಲುಪಿದೆ, ದಾಳಿ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಜೊತೆಗೆ ತನಿಖಾ ಏಜೆನ್ಸಿಯ ವಿಧಿವಿಜ್ಞಾನ ಪ್ರಯೋಗಾಲಯ ತಂಡವು ಸ್ಥಳದಲ್ಲಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ. ಮತ್ತೊಂದೆಡೆ ಸ್ಥಳೀಯ ಪೊಲೀಸರಿಂದ ಪ್ರಕರಣದ ಡೈರಿ, ಎಫ್ಐಆರ್ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಇತರ ಪ್ರಮುಖ ದಾಖಲೆಗಳನ್ನ ಸುಪರ್ಧಿಗೆ ಪಡೆದುಕೊಳ್ಳಲು NIA ಮುಂದಾಗಿದೆ.
ಜಮ್ಮು-ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಗಾಮ್ನಲ್ಲಿ ಏ.22ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು, ವಿದೇಶಿಯರು ಸೇರಿ 26 ಮಂದಿ ಬಲಿಯಾಗಿದ್ದಾರೆ.