ಮುಂಬೈ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಭಾರತದಲ್ಲಿ, ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿಯ ಪ್ರಸಾರವನ್ನು ಬಂದ್ ಮಾಡಲು ಫ್ಯಾನ್ ಕೋಡ್ ನಿರ್ಧರಿಸಿದೆ.
ಮುಂಬೈ ಮೂಲದ ಡ್ರಮ್ ಸ್ಪೋರ್ಟ್ಸ್ ಮಾಲಿಕತ್ವದ ಫ್ಯಾನ್ ಕೋಡ್‌ನಲ್ಲಿ ಪಿಎಸ್ಎಲ್ ಪಂದ್ಯಗಳು ಪ್ರಸಾರಗೊಳ್ಳುತ್ತಿದ್ದವು. ಇದೇ ವೇಳೆ, ಟೂರ್ನಿಯ ಮೂಲ ಪ್ರಸಾರ ಹಕ್ಕು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಳಿ ಇದ್ದು, 20ಕ್ಕೂ ಹೆಚ್ಚು ಭಾರತೀಯರು ಕ್ಯಾಮೆರಾ, ಪ್ರೊಡಕ್ಷನ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಹಲ್ಗಾಮ್ ದಾಳಿಯ ಬಳಿಕ ಉಭಯ ದೇಶಗಳ ನಡುವೆ ದ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಭಾರತೀಯ ಸಿಬ್ಬಂದಿಗೆ ತಕ್ಷಣ ಪಾಕಿಸ್ತಾನ ತೊರೆಯುವಂತೆ ಪಿಸಿಬಿ ಸೂಚಿಸಿದೆ ಎಂದು ವರದಿಯಾಗಿದೆ.
ಏ. 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ವಿಹಾರಧಾಮದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ 26 ಜನರು ಸಾವಿಗೀಡಾಗಿದ್ದರು. ಉಗ್ರರ ಈ ಕೃತ್ಯಕ್ಕೆ ಭಾರತ ಮಾತ್ರವಲ್ಲ ಅಮೆರಿಕ ಇನ್ನಿತರ ರಾಷ್ಟ್ರಗಳಿಂದ ಭಾರೀ ವಿರೋಧ ವ್ಯಕ್ತವಾಗಿದೆ.