ನವದೆಹಲಿ : ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ದದ ಕಾರ್ಮೋಡ ಕವಿದಿರುವ ನಡುವೆಯೇ ಪಾಕಿಸ್ತಾನ ಸುಳ್ಳು ಸುದ್ದಿಗಳ ಮೂಲಕ ಭಾರತಕ್ಕೆ ಏಟು ಪ್ರಯತ್ನಿಸುತ್ತಿರುವ ಸಂಗತಿ ಬಹಿರಂಗವಾಗಿದೆ. ಸದ್ಯ ಇದೇ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವಾಲಯವು ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿಯ ಮೂಲಕ ಪಾಕ್ ನ ಕುತಂತ್ರವನ್ನು ಬಯಲು ಮಾಡಿದೆ. ಕಲಹಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವಿದೇಶಾಂಗ ಸಚಿವಾಲಯ ಇದೇ ವೇಳೆ ಸೂಚಿಸಿದೆ.
ಇನ್ನು ಶನಿವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಂ ಮಿಸ್ರಿ, ಭಾರತದ ಪ್ರಮುಖ ನಗರಗಳನ್ನು ಗುರಿಯಾಗಿರಿಸಿ ಪಾಕಿಸ್ತಾನ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ಯಶಸ್ವಿಯಾಗಿ ತಡೆಹಿಡಿಯಲಾಗಿದೆ. ಆದರೆ ಡ್ರೋನ್ ದಾಳಿಯಿಂದ ಭಾರತದ ಹಲವು ಕಡೆಗಳಲ್ಲಿ ಹಾನಿಯಾಗಿದೆ ಎಂದು ಪಾಕಿಸ್ತಾನ ಸುಳ್ಳು ಸುದ್ದಿ ಹಬ್ಬಿಸುತ್ತಿದೆ.
ಸಿರ್ಸಾ, ಸೂರತ್ ಗರ್ ವಾಯುನೆಲೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪಾಕ್ ನ ಸುದ್ದಿ ಸಂಪೂರ್ಣ ಸತ್ಯಕ್ಕೆ ದೂರವಾಗಿದೆ. ಅದಂಪುರ್ ನಲ್ಲಿರುವ ಎಸ್-400 ವಾಯು ರಕ್ಶಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗಿದೆ ಎಂದು ಪಾಕ್ ಸುಳ್ಳಿನ ನಾಟಕವಾಡುತ್ತಿದೆ. ಅದೂ ಅಲ್ಲದೆ ದೇಶದ ವಿದ್ಯುತ್ ವ್ಯವಸ್ಥೆ, ಭಾರತದ ಮೇಲೆ ಸೈಬರ್ ದಾಳಿ ನಡೆಸಲಾಗಿದೆ ಎಂದು ಕೂಡ ಪಾಕ್ ಸುಳ್ಳು ಹೇಳುತ್ತಿದೆ ಎಂದು ಮಿಸ್ರಿ ತಿಳಿಸಿದರು. ಇದೇ ವೇಳೆ ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಕೂಡ ಆಪರೇಶನ್ ಸಿಂಧೂರ್ ಕುರಿತಾದ ಹೆಚ್ಚಿನ ಮಾಹಿತಿ ನೀಡಿದರು.