ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ( ನಡೆದ ಭಯೋತ್ಪಾದಕ ದಾಳಿಯ ಅನಂತರ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ಕೈಗೊಂಡ ಕ್ರಮಗಳಿಗೆ ಪ್ರತಿಕಾರವಾಗಿ ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಭಾರತದ ವಿಮಾನಗಳಿಗೆ ಮುಚ್ಚಿದೆ. ಇದು ಭಾರತಕ್ಕೆ ಹೊರದೇಶಗಳಿಂದ ಬರುವ ಇಲ್ಲಿಂದ ಹೊರದೇಶಗಳಿಗೆ ಹೋಗುವ ವಿಮಾನಗಳ ಸೇವೆಯಲ್ಲಿ ವ್ಯತ್ಯಯವನ್ನು ಉಂಟು ಮಾಡಲಿದೆ. ಹೀಗಾಗಿ ವಿಮಾನ ಪ್ರಯಾಣಿಕರು ವಿಮಾನದ ಸಮಯ ಮತ್ತು ವೇಳಾ ಪಟ್ಟಿಯನ್ನು ಪರಿಶೀಲಿಸಿ ಹೋರಾಡುವಂತೆ ಏರ್ ಇಂಡಿಯಾ ಮತ್ತು ಇಂಡಿಗೋ ಪ್ರಕಟಣೆ ತಿಳಿಸಿದೆ.
ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ಸ್ಥಗಿತಗೊಳಿಸಿದ್ದರಿಂದ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಏರ್ ಇಂಡಿಯಾ ಮತ್ತು ಇಂಡಿಗೋ ಎಚ್ಚರಿಕೆ ನೀಡಿವೆ. ಈ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿರುವ ಎರಡೂ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಪ್ರಯಾಣದ ಸಮಯ ಮತ್ತು ವೇಳಾಪಟ್ಟಿಯನ್ನು ಪರಿಶೀಲಿಸುವಂತೆ ಪ್ರಯಾಣಿಕರಿಗೆ ಸೂಚಿಸಿದೆ.
ಪಹಲ್ಗಾಮ್ ದುರಂತಕ್ಕೆ ಪ್ರತಿಯಾಗಿ ಭಾರತ ಸರ್ಕಾರ ಕೈಗೊಂಡ ಕ್ರಮಗಳಿಗೆ ಪ್ರತಿಯಾಗಿ ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಹೀಗಾಗಿ ಸೇವೆಯಲ್ಲಿ ಅಡಚಣೆ ಉಂಟಾಗಲಿದೆ ಎಂದು ಇಂಡಿಗೋ ಮತ್ತು ಏರ್ ಇಂಡಿಯಾ ಸಾಮಾಜಿಕ ಜಾಲತಾಣವಾದ ಎಕ್ಸ್ ಮೂಲಕ ಪ್ರಯಾಣಿಕರಿಗೆ ತಿಳಿಸಿದೆ.
ವಿಮಾನ ಮಾರ್ಗಗಳನ್ನು ಬದಲಾಯಿಸಬೇಕಾಗಿರುವುದರಿಂದ “ಪರ್ಯಾಯ ವಿಸ್ತೃತ ಮಾರ್ಗ” ಕ್ಕೆ ಕಾರಣವಾಗುವ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ವೇಳಾಪಟ್ಟಿಯ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ. ಇದು ಅಮೆರಿಕ, ಯುರೋಪ್ ಮತ್ತು ಮಧ್ಯಪ್ರಾಚ್ಯಕ್ಕೆ ತೆರಳುವ ಕೆಲವು ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಏರ್ ಇಂಡಿಯಾ ಹೇಳಿದೆ.
ಇದರಿಂದ ಪ್ರಯಾಣಿಕರಿಗೆ ಆಗುವ ಅನನುಕೂಲತೆಗೆ ವಿಷಾದಿಸುತ್ತೇವೆ. ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಪ್ರಯಾಣಿಕರು ವಿಮಾನ ಸಮಯ ಮತ್ತು ವೇಳಾಪಟ್ಟಿಯನ್ನು ಎರಡು ಬಾರಿ ಪರಿಶೀಲಿಸುವಂತೆ ಎರಡೂ ವಿಮಾನಯಾನ ಸಂಸ್ಥೆಗಳು ತಿಳಿಸಿವೆ.