ಇಸ್ಲಾಮಾಬಾದ್ : ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಉಗ್ರ ಮಸೂದ್ ಅಜರ್ನ 14 ಮಂದಿ ಕುಟುಂಬ ಸದಸ್ಯರ ಹತ್ಯೆ ಹಿನ್ನೆಲೆ ಪಾಕ್ ಸರ್ಕಾರ ಮಸೂರ್ ಅಜರ್ಗೆ 14 ಕೋಟಿ ರೂ. ಪರಿಹಾರ ಘೋಷಿಸಿದೆ. ಈ ಮೂಲಕ ಪಾಕಿಸ್ತಾನ ದೇಶವು ಉಗ್ರರನ್ನ ಪೋಷಿಸುತ್ತದೆ ಎಂಬುದು ಮತ್ತೆ ಸಾಬೀತಾಗಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ಭಾರತ ಸೇನೆ ದಾಳಿ ನಡೆಸಿತ್ತು. ಪಾಕ್ನ ಬಹಾವಲ್ಪುರದಲ್ಲಿ ಉಗ್ರ ಸಂಘಟನೆಯ ಪ್ರಧಾನ ಕಚೇರಿಯ ಮೇಲೆ ಭಾರತ ಸೇನೆ ನಡೆಸಿದ ದಾಳಿಯಲ್ಲಿ ನಿಷೇಧಿತ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಮಂದಿ ಹಾಗೂ ಇತರ 4 ಮಂದಿ ಸೇರಿ 4 ಮಂದಿ ಹತ್ಯೆಯಾಗಿದ್ದರು.
ಬಹಾವಲ್ಪುರದ ಸುಭಾನ್ ಅಲ್ಲಾ ಮಸೀದಿ ಮೇಲಿನ ದಾಳಿಯಲ್ಲಿ ಬಲಿಯಾದವರಲ್ಲಿ ಪೈಕಿ ಜೆಇಎಂ ಮುಖ್ಯಸ್ಥನ ಅಕ್ಕ ಮತ್ತು ಆಕೆಯ ಪತಿ, ಸೋದರಳಿಯ ಮತ್ತು ಅವರ ಪತ್ನಿ, ಮತ್ತೊಬ್ಬ ಸೊಸೆ ಮತ್ತು ಅವರ ಕುಟುಂಬದ 5 ಮಕ್ಕಳು ಸೇರಿದ್ದಾರೆ. ಇದರ ಜೊತೆಗೆ ಮಸೂದ್ನ ಆಪ್ತ ಸಹಚರ, ಆತನ ತಾಯಿ ಸೇರಿ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಅಜರ್ ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು.