ಇಸ್ಲಮಾಬಾದ್ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯ ಬಳಿಕ ಪಾಕ್‌ಗೆ ತಕ್ಕ ತಿರುಗೇಟು ನೀಡಲು ಭಾರತ ಸಜ್ಜಾಗುತ್ತಿದೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಪ್ರಾರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದೀಗ ನಿರ್ಮಾಣವಾದ ಪರಿಸ್ಥಿತಿಯು ಸಿನಿಮಾ ಮತ್ತು ಸಂಗೀತ ಕ್ಷೇತ್ರದ ಮೇಲೂ ಪರಿಣಾಮ ಬೀರುತ್ತಿದೆ.
ಈಗಾಗಲೇ ಭಾರತದಲ್ಲಿ ಪಾಕ್ ಕಲಾವಿದರಿಗೆ ನಿಷೇಧ ಹೇರಲಾಗಿದೆ. ಇದೀಗ ಪಾಕ್‌ನಲ್ಲೂ ಭಾರತದ ಮನರಂಜನಾ ಕಂಟೆಂಟ್‌ಗಳನ್ನು ನಿಷೇಧಿಸಲಾಗುತ್ತಿದ್ದು, ಅಲ್ಲಿನ ಎಫ್‌ಎಂ ಸ್ಟೇಷನ್‌ಗಳಲ್ಲಿ ಭಾರತದ ಹಾಡುಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ಹೇರಲಾಗಿದೆ.
ಪಾಕ್‌ನಲ್ಲಿ ಬಾಲಿವುಡ್ ಸಿನಿಮಾ ಹಾಡುಗಳಿಗೆ ಬಹಳ ಬೇಡಿಕೆ ಇದೆ. ಟಿವಿ ಮತ್ತು ರೇಡಿಯೋ ವಾಹಿನಿಗಳಲ್ಲಿ ಹಿಂದಿ ಸಾಂಗ್ಸ್ ಪ್ರಸಾರ ಮಾಡಲಾಗುತ್ತದೆ. ಆದರೆ ಪಹಲ್ಗಾಮ್ ದಾಳಿಯ ಬಳಿಕ ಅಲ್ಲಿನ ಪರಿಸ್ಥಿತಿ ಬದಲಾಗಿದೆ. ಪಾಕಿಸ್ತಾನ್ ಬ್ರಾಡ್‌ಕಾಸ್ಟರ್ ಒಕ್ಕೂಟವು (ಪಿಬಿಎ) ಭಾರತದ ಹಾಡುಗಳ ಪ್ರಸಾರ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದು, ಈ ನಿರ್ಧಾರವನ್ನು ಅಲ್ಲಿನ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡ ಸ್ವಾಗತಿಸಿದೆ.