ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಕೊನೆಗೂ ಮೌನ ಮುರಿದ್ದು, ‘ತಟಸ್ಥ ಮತ್ತು ಪರಸ್ಪರ ಆರೋಪರಹಿತ ತನಿಖೆʼಗೆ ಸಿದ್ಧವಿದ್ದೇವೆಂದು ಹೇಳಿದ್ದಾರೆ.
ಖೈಬರ್-ಪಖ್ತುನ್ಖ್ವಾದ ಕಾಕುಲ್‌ನಲ್ಲಿರುವ ಪಾಕಿಸ್ತಾನ ಮಿಲಿಟರಿ ಅಕಾಡೆಮಿಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿರುವ ಅವರು, ಪಹಲ್ಗಾಮ್ ಉಗ್ರರ ದಾಳಿ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ದುರಂತವು ನಿರಂತರವಾಗಿ ನಡೆಯುತ್ತಿರುವ ಆರೋಪದ ಆಟಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಇದಕ್ಕೆ ಅಂತ್ಯ ಹಾಡಬೇಕಿದೆ. ಜವಾಬ್ದಾರಿಯುತ ದೇಶವಾಗಿ ಪಾಕಿಸ್ತಾನವು ವಿಶ್ವಾಸಾರ್ಹ ತನಿಖೆಯಲ್ಲಿ ಭಾಗವಹಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ಅಂತಾರಾಷ್ಟ್ರೀಯ ತನಿಖಾಧಿಕಾರಿಗಳು ನಡೆಸುವ ಯಾವುದೇ ತನಿಖೆಗೆ ಸಹಕರಿಸಲು ಪಾಕಿಸ್ತಾನ ಸಿದ್ಧವಿದೆ. ನಮ್ಮ ಸೈನ್ಯ ಯುದ್ಧಕ್ಕೆ ಸಿದ್ಧವಾಗಿದೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ನಮಗಿದೆ.. ಆದರೆ, ಶಾಂತಿ ನಮ್ಮ ಆದ್ಯತೆ. ಆದರೆ ಯಾರೂ ಅದನ್ನು ನಮ್ಮ ದೌರ್ಬಲ್ಯವೆಂದು ಪರಿಗಣಿಸಬಾರದು. ಭದ್ರತೆಯ ವಿಷಯದಲ್ಲಿ ನಾವು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಪಹಲ್ಗಾಮ್ ದಾಳಿ ಪ್ರಕರಣಗಳಲ್ಲಿ ಭಾರತವು ಶೋಷಣೆಯ ಮಾದರಿಯನ್ನು ಮುಂದುವರೆಸಿದೆ. ಸಾಕ್ಷ್ಯಾಧಾರಗಳಿಲ್ಲದೆ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಆದರೆ, ಪಾಕಿಸ್ತಾನ ಸದಾಕಾಲ ಎಲ್ಲಾ ರೂಪದ ಭಯೋತ್ಪಾದನೆಯನ್ನು ಖಂಡಿಸಿದೆ. ವಿಶ್ವದ ಇತರ ಯಾವುದೇ ದೇಶಗಳು, ಪಾಕಿಸ್ತಾನ ಅನುಭವಿಸಿದ್ದಷ್ಟು ಸಾವುನೋವುಗಳನ್ನು ಅನುಭವಿಸಲಿಲ್ಲ.
ಹಾಗಾಗಿ ಉಗ್ರ ಕೃತ್ಯದಿಂದಾಗುವ ನೋವುಗಳನ್ನು ಅನುಭವಿಸುವ ಅನುಭವವನ್ನು ನಾವು ಹೊಂದಿದ್ದೇವೆ. ಉಗ್ರರ ದಾಳಿಯಿಂದ 90,000 ಸಾವುನೋವುಗಳು ಹಾಗೂ ಕಲ್ಪನೆಗೂ ಮೀರಿದ ಆರ್ಥಿಕ ನಷ್ಟಗಳು ಎದುರಿಸಿದ್ದೇವೆ. 600 ಬಿಲಿಯನ್ ಗೂ ಹೆಚ್ಚು ಆರ್ಥಿಕ ನಷ್ಟ ಎದುರಿಸಿದ್ದೇವೆ. ಕಾಶ್ಮೀರ ಜನರು ತ್ಯಾಗಗಳ ಮೂಲಕ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದು, ಅವರಿಗೆ ಅವರ ಹಕ್ಕು ಸಿಗುವವರೆಗೆ ನಾವು ಬೆಂಬಲ ನೀಡುತ್ತೇವೆಂದು ತಿಳಿಸಿದ್ದಾರೆ.
ಇದೇ ವೇಳೆ ಸಿಂದು ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದ ಕುರಿತು ಮಾತನಾಡಿದ ಅವರು, ಸಿಂಧೂ ನದಿಯ ನೀರನ್ನು ಭಾರತ ಬೇರೆ ಕಡೆ ತಿರುಗಿಸಿದರೆ ನಾವು ಸೇನೆಯನ್ನು ಬಳಸಿ ಉತ್ತರ ನೀಡುತ್ತೇವೆಂದು ಹೇಳಿದ್ದಾರೆ.