ನವದೆಹಲಿ: ಹಿಂದಿನ ಎರಡು ಸರ್ಜಿಕಲ್ ಸ್ಟ್ರೈಕ್‌ಗಳಂತೆ ಈ ಸಲವೂ ಪಾಕಿಸ್ಥಾನಕ್ಕೆ ಭಾರತದ ತಂತ್ರವನ್ನು ಅರಿಯಲು ಸಾಧ್ಯವಾಗದೆ ಹೋಯಿತು. ಹೀಗಾಗಿ ಯಾವುದೇ ಪ್ರತಿರೋಧ ತೋರಿಸದೆ ತನ್ನ 9 ಉಗ್ರ ನೆಲೆಗಳನ್ನು ಭಾರತದ ಧ್ವಂಸ ಮಾಡುವುದನ್ನು ನೋಡುತ್ತಾ ಕೈಕಟ್ಟಿ ನಿಲ್ಲಬೇಕಾಯಿತು.
ಭಾರತ ಪಹಲ್ಗಾಮ್‌ಗೆ ದಾಳಿಗೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎನ್ನುವುದು ಪಾಕಿಸ್ಥಾನಕ್ಕೆ ಸ್ಪಷ್ಟವಾಗಿ ತಿಳಿದಿತ್ತು. ಹೀಗಾಗಿ ಪಾಕಿಸ್ಥಾನದ ಸಚಿವರು ಮಾಧ್ಯಮಗಳ ಮುಂದೆ ದಾಳಿಯಾದರೆ ಬಿಡುವುದಿಲ್ಲ, ನಾವೂ ಪ್ರತಿದಾಳಿ ಮಾಡುತ್ತೇವೆ, ನಮ್ಮಲ್ಲಿ ಅಣ್ವಸ್ತ್ರ ಇದೆ ಎಂದೆಲ್ಲ ಬೊಗಳೆ ಬಿಡುತ್ತಿದ್ದರೆ ಹೊರತು ದಾಳಿ ಯಾವ ರೀತಿ ಆಗಬಹುದು ಎಂಬ ಕಿಂಚಿತ್ ಅಂದಾಜು ಕೂಡ ಅವರಿಗೆ ಇರಲಿಲ್ಲ.
ಶತ್ರುಗಳನ್ನು ಯಾಮಾರಿಸುವುದರಲ್ಲಿ ಮೋದಿ ನಿಸ್ಸೀಮರು ಎನ್ನುವುದು ಇಂದಿನ ಏರ್‌ಸ್ಟ್ರೈಕ್‌ನಿಂದ ಮತ್ತೊಮ್ಮೆ ಸಾಬೀತಾಗಿದೆ. ಪಾಕಿಸ್ಥಾನದ ನಾಯಕರು ಅಷ್ಟೆಲ್ಲ ಪ್ರಚೋದನಕಾರಿಯಾಗಿ ಮಾತನಾಡುತ್ತಿದ್ದರೂ ಮೋದಿ ಯುದ್ಧದ ಮಾತೇ ಎತ್ತಿರಲಿಲ್ಲ. ಪ್ರತೀಕಾರ ತೀರಿಸುತ್ತೇವೆ ಎಂದು ಮಾತ್ರ ಹೇಳಿದ್ದರು. ಭಾರತ ಇನ್ನೂ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಎಂದು ಪಾಕಿಸ್ಥಾನವನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದರು.
ಇಂದು ಮಾಕ್ ಡ್ರಿಲ್ ನಡೆಸಲು ರಾಜ್ಯಗಳಿಗೆ ಸೂಚನೆ ನೀಡಿದ್ದು ಕೂಡ ಪಾಕಿಸ್ಥಾನವನ್ನು ಮೂರ್ಖನನ್ನಾಗಿಸುವ ತಂತ್ರ ಎಂದೇ ಈಗ ಹೇಳಲಾಗುತ್ತಿದೆ. ಯುದ್ಧ ಸಂಭವಿಸಿದರೆ ನಾಗರಿಕರನ್ನು ಪಾರು ಮಾಡಲು ಅಣಕು ಕಾರ್ಯಾಚರಣೆ ನಡೆಸಿ ತರಬೇತಿ ನೀಡಲು ರಾಜ್ಯಗಳಿಗೆ ಎರಡು ದಿನಗಳ ಹಿಂದೆ ಕೇಂದ್ರ ಸೂಚನೆ ನೀಡಿತ್ತು. ಇದನ್ನು ನೋಡಿ ಭಾರತ ಇನ್ನೂ ಯುದ್ಧ ತಯಾರಿಯಲ್ಲೇ ಇದೆ ಎಂದು ಪಾಕಿಸ್ಥಾನ ಭಾವಿಸಿತ್ತು. ಹೀಗಾಗಿ ಮಾಧ್ಯಮಗಳ ಮುಂದೆ ತನ್ನ ಉತ್ತರ ಕುಮಾರನ ಪೌರುಷ ಮುಂದುವರಿಸಿತ್ತು.
ರಾತ್ರಿ ಭಾರಿ ದೊಡ್ಡ ಕಾರ್ಯಾಚರಣೆ ನಡೆಯಲಿದ್ದರೂ ಹಗಲಿಡೀ ಮೋದಿ ಎಂದಿನಂತೆ ತನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ತನ್ನ ನಡೆಯಲ್ಲಾಗಲಿ ನುಡಿಯಲ್ಲಾಗಲಿ ಅವರು ರಾತ್ರಿ ನಡೆಯಲಿರುವ ಕಾರ್ಯಾಚರಣೆಯ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ. ನಿನ್ನೆ ರಾತ್ರಿ 9 ಗಂಟೆಗೆ ಸಮಾವೇಶವೊಂದರಲ್ಲಿ ಸುಮಾರು ಅರ್ಧ ತಾಸು ಮಾತನಾಡಿ ದೇಶದ ಅಭಿವೃದ್ಧಿ, ಆಕಾಂಕ್ಷೆಗಳು, 2047ಕ್ಕಾಗುವಾಗ ಸಶಕ್ತ ರಾಷ್ಟ್ರ ಮಾಡುವುದು ಇತ್ಯಾದಿ ವಿಚಾರಗಳನ್ನು ಹಂಚಿಕೊಂಡಿದ್ದರು. ಅವರ ಮುಖಭಾವದಲ್ಲಿ ಕೂಡ ಯಾವ ಒತ್ತಡವೂ ಕಾಣಿಸುತ್ತಿರಲಿಲ್ಲ. ಎಂದಿನಂತೆ ಕೂಲಾಗಿ ಲವಲವಿಕೆಯಿಂದ ಮಾತನಾಡಿದ್ದರು ಪಾಕಿಸ್ಥಾನದ ವಿರುದ್ಧ ಪ್ರತೀಕಾರ ತೀರಿಸುವ ಬಗ್ಗೆ ಕೇಳಿದಾಗಲೂ ಈ ಪ್ರಶ್ನೆಗೆ ಉತ್ತರಿಸದೆ ವಿಚಾರ ಬದಲಾಯಿಸಿದ್ದರು. ಈಗ ಇವೆಲ್ಲ ಪಾಕಿಸ್ಥಾನವನ್ನು ಬೇಸ್ತುಬೀಳಿಸಲೆಂದೇ ಮಾಡಿದ ತಂತ್ರ ಎನ್ನುವುದು ಸ್ಪಷ್ಟವಾಗತೊಡಗಿದೆ.
2019ರಲ್ಲಿ ಬಾಲಾಕೋಟ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆದಾಗಲೂ ಮೋದಿ ಇದೇ ರೀತಿ ಇದ್ದರು. ಆಗಲೂ ದಾಳಿಗೆ ಎರಡು ದಿನ ಮೊದಲೇ ಯೋಜನೆ ಸಿದ್ಧವಾಗಿದ್ದರೂ ಮೋದಿಯ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಇಂಥ ಒಂದು ದೊಡ್ಡ ಕಾರ್ಯಾಚರಣೆಗೆ ದೇಶ ತಯಾರಾಗಿ ನಿಂತಿದೆ ಎಂಬ ಸುಳಿವನ್ನೂ ಎಲ್ಲೂ ಬಿಟ್ಟುಕೊಟ್ಟಿರಲಿಲ್ಲ. 2019ರಂದು ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಲೋಕಾರ್ಪಣೆ ಮಾಡಿ ಸೈನಿಕರ ಬಲಿದಾನದ ಬಗ್ಗೆ ಭಾನವಾತ್ಮಕವಾಗಿ ಮಾತನಾಡಿದ್ದರು. ಅದರ ಮರುದಿನವೇ ಬಾಲಾಕೋಟ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿತ್ತು.
ಹೀಗೆ ಮೂರು ಸಲವೂ ಪಾಕಿಸ್ಥಾನಕ್ಕೆ ಚಿಕ್ಕ ಅನುಮಾನವೂ ಬಾರದಂತೆ ವರ್ತಿಸಿ ಅದರ ಮೇಲೆ ದಾಳಿ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಎಲ್ಲಾದರೂ ಪಾಕಿಸ್ಥಾನದ ನಾಯಕರಿಗೆ ಮೋದಿಯವರ ಈ ಸ್ವಭಾವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು. ಆದರೆ ತಮ್ಮದು ಬರೀ ಬೊಗಳೆ ಪೌರುಷ ಎಂದು ಅವರು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.