ಇಸ್ಲಾಮಾಬಾದ್ : ಭಾರತೀಯ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶ ನಿಷೇಧವನ್ನು ಆ.24ರ ವರೆಗೆ ವಿಸ್ತರಿಸಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶ ನಿಷೇಧವನ್ನು ಮತ್ತೊಂದು ತಿಂಗಳು ವಿಸ್ತರಿಸಿದೆ. ಆ.24ರ ಬೆಳಗ್ಗೆ 5:19ರ ವರೆಗೆ ನಿಷೇಧ ಜಾರಿಯಲ್ಲಿರಲಿದೆ ಎಂದು ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ (ಪಿಎಎ) ಮಾಹಿತಿ ನೀಡಿದೆ.
ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಯಾವುದೇ ವಿಮಾನಗಳು, ಭಾರತೀಯ ಒಡೆತನದ ಅಥವಾ ಗುತ್ತಿಗೆ ಪಡೆದ ಮಿಲಿಟರಿ ಮತ್ತು ನಾಗರಿಕ ವಿಮಾನಗಳು ಪಾಕಿಸ್ತಾನಿ ವಾಯುಪ್ರದೇಶವನ್ನು ಬಳಸಲು ಅನುಮತಿ ನೀಡುವುದಿಲ್ಲ ಎಂದು ಪಿಎಎ ಆದೇಶ ಹೊರಡಿಸಿದೆ.
ಏಪ್ರಿಲ್ 22 ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಅನೇಕ ರಾಜತಾಂತ್ರಿಕ ಮಾರ್ಗದ ಮೂಲಕ ತಿರುಗೇಟು ನೀಡಿತ್ತು. ಅದರಂತೆ ಎಲ್ಲಾ ಪಾಕಿಸ್ತಾನಿ ವಿಮಾನಗಳಿಗೆ ಭಾರತೀಯ ವಾಯು ಮಾರ್ಗ ಬಂದ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಕೂಡ ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿತ್ತು.