ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀಧರದ ಪಹಲ್ಗಾಮ್ ನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಭಾರತ ಕಡಿದುಕೊಂಡಿದೆ. ಈ ಸಂಬಂಧ, ಐದಾರು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದೆ.
ಈ ನಡುವೆ ಭಾರತದಲ್ಲಿ ಲಭ್ಯವಿದ್ದ ಪಾಕಿಸ್ತಾನ ಸರಕಾರದ ಅಧಿಕೃತ ಎಕ್ಸ್ ಖಾತೆಯನ್ನು ಕೇಂದ್ರ ಸರಕಾರ ಸ್ಥಗಿತಗೊಳಿಸಿದೆ. ಇದೇ ರೀತಿ ಫೇಸ್ ಬುಕ್ ಸೇರಿದಂತೆ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿನ ಪಾಕಿಸ್ತಾನ ಸರಕಾರದ ಅಧಿಕೃತ ಖಾತೆಗಳನ್ನು ರದ್ದುಗೊಳಿಸಿದೆ. ಆ ಮೂಲಕ, ಪಾಕಿಸ್ತಾನವು ಭಾರತದಲ್ಲಿ ತನ್ನ ಸಂವಹನ ಮಾಧ್ಯಮವಾಗಿ ಬಳಸುತ್ತಿದ್ದ Government Of Pakistan ಎಂಬ ಖಾತೆಯು ಭಾರತದಲ್ಲಿ ಲಭ್ಯವಾಗದಂತೆ ತಡೆ ಹಿಡಿದಿದೆ.
ಇದಕ್ಕೂ ಮುನ್ನ, ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಲು ತೀರ್ಮಾನಿಸಿದ್ದ ಕೇಂದ್ರ ಸರಕಾರ, ಭಾರತದಲ್ಲಿನ ಪಾಕಿಸ್ತಾನ ದೂತಾವಾಸ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇನಾ ರಾಜತಾಂತ್ರಿಕರನ್ನು ದೇಶದಿಂದ ಹೊರಗೆ ಕಳಿಸಲು ನಿರ್ಧರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ಸಂಜೆ ನಡೆದಿದ್ದ ‘ಭದ್ರತೆ ಕುರಿತ ಸಚಿವ ಸಂಪುಟ’ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.
ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪಟ್ಟಣದ ಬಳಿಯಿರುವ ಬೈಸರಣ್ ಹುಲ್ಲುಗಾವಲು ವೀಕ್ಷಿಸಲೆಂದು ಬಂದಿದ್ದ ಪ್ರವಾಸಿಗರ ಮೇಲೆ ಮಂಗಳವಾರ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದ ಭಯೋತ್ಪಾದಕರು, 28 ಮಂದಿಯನ್ನು ಹತ್ಯೆಗೈದು, ಕನಿಷ್ಠ ಪಕ್ಷ 20 ಮಂದಿಯನ್ನು ಗಾಯಗೊಳಿಸಿದ್ದರು.