ಇಸ್ಲಾಮಾಬಾದ್: “ನಾವು ಭಾರತದ ವಿರುದ್ಧ ಗೆದ್ದಿದ್ದೇವೆ” ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಸುಳ್ಳು ಕತೆ ಕಟ್ಟಿದ್ದಾರೆ.
ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘಿಸಿ ಭಾರತದ ಮೇಲೆ ಮತ್ತೆ ದಾಳಿ ನಡೆಸಿತ್ತು. ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ಕೂಡ ನೀಡಿತ್ತು. ಈ ನಡುವೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್, “ನಮ್ಮ ದಾಳಿಯು ಶತ್ರುಗಳ (ಭಾರತ) ವಾಯುನೆಲೆ ಮತ್ತು ಮದ್ದುಗುಂಡುಗಳನ್ನು ನಾಶಪಡಿಸಿತು. ಅವರ ರಫೇಲ್ ಅನ್ನು ನಾವು ಹೊಡೆದುರುಳಿಸಿದ್ದೇವೆ” ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ ಶೆಹಬಾಜ್ ಶರೀಫ್, “ಕದನ ವಿರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ಚೀನಾ ಅಧ್ಯಕ್ಷ, ಚೀನಾದ ಜನರಿಗೆ ಧನ್ಯವಾದ ಹೇಳುತ್ತೇನೆ. ಸೌದಿ ಅರೇಬಿಯಾ, ಯುಎಇ, ಟರ್ಕಿ, ಕತಾರ್ ಮತ್ತು ಬ್ರಿಟನ್ ನಾಯಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
“ನನ್ನ ಪ್ರೀತಿಯ ಸಹೋದರ, ರಾಜಕುಮಾರ ಮೊಹಮ್ಮದ್ ಬಿನ್ ಜಾಯೆದ್ ಮತ್ತು ಕತಾರ್‌ನ ನನ್ನ ಅತ್ಯಂತ ಆಪ್ತ ಸಹೋದರ ಅಮೀರ್ ಶೇಖ್ ತಮೀಮ್ ಮತ್ತು ಟರ್ಕಿಯ ಅಧ್ಯಕ್ಷ ತಯ್ಯಿಬ್ ಎರ್ಡೋಗನ್ ಅವರು ಪಾಕಿಸ್ತಾನವನ್ನು ಸಹೋದರರಂತೆ ಬೆಂಬಲಿಸಿದ್ದಕ್ಕಾಗಿ ಧನ್ಯವಾದ” ಎಂದು ತಿಳಿಸಿದ್ದಾರೆ.