ಇಸ್ಲಾಮಾಬಾದ್ : ಭಾರತದ ಆಪರೇಷನ್ ಸಿಂಧೂರ ಬಳಿಕ ಪಾಕಿಸ್ತಾನಕ್ಕೆ 19 ಸಾವಿರ ಕೋಟಿ ಸಾಲ ಮಂಜೂರು ಮಾಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಇದೀಗ ಸಾಲದ ಹಣ ಬಿಡುಗಡೆ ಮಾಡುವುದಕ್ಕೂ ಮುನ್ನ 11 ಹೊಸ ಷರತ್ತುಗಳನ್ನು ವಿಧಿಸಿದೆ. ಜೊತೆಗೆ ಷರತ್ತು ಪಾಲಿಸದಿದ್ದರೆ ಹಣ ಸಿಗುವುದಿಲ್ಲ ಎಂದು ಪಾಕ್ಗೆ ಎಚ್ಚರಿಕೆ ನೀಡಿದೆ.
ಪಾಕಿಸ್ತಾನಕ್ಕೆ ಸಾಲ ಮಂಜೂರು ಮಾಡಿದ ಬಳಿಕ ಐಎಂಎಫ್ಗೆ ಸಾಲ ಮರುಪಾವತಿ ಆಗುತ್ತದೆಯೇ ಇಲ್ಲವೇ ಎಂಬ ಆತಂಕ ಶುರುವಾಗಿದೆ. ಹೀಗಾಗಿ ತನ್ನ ವಿಸ್ತೃತ ನಿಧಿ ಸೌಲಭ್ಯ ಅಡಿಯಲ್ಲಿ ಸಾಲ ಮಂಜೂರು ಮಾಡಿದ್ದ ಐಎಂಎಫ್ 11 ಹೊಸ ಷರತ್ತುಗಳನ್ನು ವಿಧಿಸಿದೆ. ಈ ಮೂಲಕ ಪಾಕ್ ಮೇಲೆ ಈವರೆಗೆ ವಿಧಿಸಿರುವ ಒಟ್ಟು ಷರತ್ತುಗಳು 50ಕ್ಕೆ ಏರಿಕೆಯಾಗಿದೆ. ಪಾಕ್ ಈ ಷರತ್ತುಗಳನ್ನು ಪಾಲಿಸದಿದ್ದರೆ ಮುಂದಿನ ಕಂತಿನ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಐಎಂಎಫ್ ತಿಳಿಸಿದೆ.
ಭಾರತ-ಪಾಕಿಸ್ತಾನದ ಉದ್ವಿಗ್ನತೆ ಮುಂದುವರಿದ್ರೆ ಅದರ ಪರಿಣಾಮವು ಹಣಕಾಸು ವ್ಯವಸ್ಥೆ, ದೇಶದ ಆಂತರಿಕ ಮತ್ತು ಬಾಹ್ಯ ಸುಧಾರಣೆಗಳ ಮೇಲೆ ಪರಿಣಾಮ ಬೀರಬಹುದು. 17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್ಗೆ ಅನುಮೋದನೆ ನೀಡುವುದು, ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಸುಧಾರಣೆ ತರುವುದು, ವಿದ್ಯುತ್ ಬಿಲ್ಗಳ ಮೇಲೆ ಹೆಚ್ಚಿನ ಸರ್ಚಾರ್ಜ್ ವಿಧಿಸುವುದು ಸೇರಿದಂತೆ 11 ಷರತ್ತುಗಳನ್ನು ಐಎಂಎಫ್ ವಿಧಿಸಿದೆ.
ಷರತ್ತುಗಳು ಈ ಕೆಳಗಿನಂತಿವೆ:
* ಮುಂದಿನ ಜುಲೈ 1ರೊಳಗೆ ವಾರ್ಷಿಕ ವಿದ್ಯುತ್ ದರ ಪರಿಷ್ಕರಣೆಯ ಅಧಿಸೂಚನೆ ಹೊರಡಿಸುವುದು.
* 2026ರ ಫೆಬ್ರವರಿ 15 ರೊಳಗೆ ಅರ್ಧ ವಾರ್ಷಿಕ ಅನಿಲ ದರ ಹೊಂದಾಣಿಕೆ
* ವಿದ್ಯುತ್ ಸ್ಥಾವರಗಳ ಮೇಲೆ ವಿಧಿಸುವ ಶುಲ್ಕಕ್ಕೆ ಈ ವರ್ಷದ ಅಂತ್ಯದೊಳಗೆ ಸುಗ್ರೀವಾಜ್ಞೆ ಶಾಶ್ವತಗೊಳಿಸಬೇಕು (ಕೈಗಾರಿಕಾ ಇಂಧನ ಬಳಕೆಯನ್ನು ರಾಷ್ಟ್ರೀಯ ಗ್ರಿಡ್ಗೆ ಬದಲಾಯಿಸುವ ಗುರಿ)
* ಮುಂದಿನ ಜೂನ್ ಅಂತ್ಯದ ವೇಳೆಗೆ ಸಾಲ ಸೇವಾ ಸರ್ಚಾರ್ಜ್ನ ಪ್ರತಿ ಯೂನಿಟ್ಗೆ 3.21 ರೂ. ಮಿತಿ ತೆಗೆದುಹಾಕುವುದು
* 17.6 ಟ್ರಿಲಿಯನ್ ರೂಪಾಯಿಗಳ ಹೊಸ ಬಜೆಟ್ಗೆ ಸಂಸತ್ತಿನ ಅನುಮೋದನೆ
* ಕೃಷಿ ಆದಾಯ ತೆರಿಗೆ ಸುಧಾರಣೆ, ಆಡಳಿತದಲ್ಲಿ ಸುಧಾರಣೆ
* ದೀರ್ಘ ಕಾಲಕ್ಕೆ ಹಣಕಾಸು ವಲಯಕ್ಕೆ ಕಾರ್ಯತಂತ್ರ
* ವಿಶೇಷ ತಂತ್ರಜ್ಞಾನ ವಲಯಗಳ ಪ್ರೋತ್ಸಾಹಕ್ಕಾಗಿ ಹಂತ-ಹಂತದ ಯೋಜನೆ
* 3 ವರ್ಷಗಳು ಮಾತ್ರ ಉಪಯೋಗಿಸಿದ ಕಾರು ಆಮದು ಉದಾರೀಕರಣ
* ಅಭಿವೃದ್ಧಿ ವೆಚ್ಚದ ಬದ್ಧತೆ
* 6 ಟ್ರಿಲಿಯನ್ ಬಜೆಟ್ನಲ್ಲಿ 1.07 ಟ್ರಿಲಿಯನ್ ಅಭಿವೃದ್ಧಿ ವೆಚ್ಚಕ್ಕೆ ಮೀಸಲಿಡಬೇಕು