ನವದೆಹಲಿ : ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ. ಇದೇ ವೇಳೆಯಲ್ಲಿ ಭಾರತೀಯ ಸೇನಾ ಪಡೆ ಎರಡು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ 2 ಜೆಟ್ಗಳನ್ನು ಶನಿವಾರ ಹೊಡೆದುರುಳಿಸಲಾಗಿದೆ. 2 ಪಾಕಿಸ್ತಾನಿ ಜೆಟ್ಗಳ ಪೈಕಿ ಒಂದನ್ನು ಶ್ರೀನಗರದ ಲಾಸ್ಜನ್ ಬಳಿ ಹೊಡೆದುರುಳಿಸಲಾಗಿದೆ ಮತ್ತು ಇನ್ನೊಂದನ್ನು ಉತ್ತರ ಕಾಶ್ಮೀರದಲ್ಲಿ ಹೊಡೆದುರುಳಿಸಲಾಗಿದೆ ಎಂದು ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ.
ಘಟನೆಯ ಬಗ್ಗೆ ರಕ್ಷಣಾ ಇಲಾಖೆ ಇನ್ನೂ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದಾಗ್ಯೂ, ಭಾರತೀಯ ಸೇನೆ F-16 ಜೆಟ್ಗಳನ್ನು ಹೊಡೆದುರುಳಿಸಿದೆ. ಈ ಮಧ್ಯೆ ಉಭಯ ರಾಷ್ಟ್ರಗಳ ವಾಯುಪಡೆಗಳ ನಡುವೆ ದಾಳಿ, ಪ್ರತಿದಾಳಿ ಮುಂದುವರೆದಿರುವುದನ್ನು ಸರ್ಕಾರಿ ಮೂಲಗಳು ದೃಢಪಡಿಸಿವೆ.
ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿ ಪಾಕಿಸ್ತಾನ ಶನಿವಾರವೂ ಹಲವಾರು ಡ್ರೋನ್ ದಾಳಿಗಳನ್ನು ನಡೆಸಿದೆ. ಶನಿವಾರ ಬೆಳಗಿನ ಜಾವ ಪಾಕಿಸ್ತಾನವು ಜಮ್ಮು ವಾಯುನೆಲೆ ಮತ್ತು ಉಧಂಪುರ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ. ಆದರೆ, ಭಾರತ ಈ ದಾಳಿಯನ್ನು ವಿಫಲಗೊಳಿಸಿದೆ. ಫತೇಹ್-1 ಕ್ಷಿಪಣಿಯನ್ನು ಪಾಕ್ನಿಂದ ಹಾರಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಪಾಕಿಸ್ತಾನದ ಕ್ಷಿಪಣಿ ಬಿದ್ದಿದೆ. ಅದರ ಅವಶೇಷಗಳನ್ನು ಹೊರತೆಗೆಯಲಾಗಿದೆ. ಉಧಮ್ಪುರದ ಹಲವು ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದ ಇನ್ನೂ ಕೇಳಿಬರುತ್ತಿದೆ.