ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ, ಕುತಂತ್ರಿ ಪಾಕಿಸ್ತಾನ ಪ್ರತಿಕ್ರಿಯಿಸಿದೆ. ಈ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧ ಇಲ್ಲ. ಭಾರತದ ಕೇಂದ್ರ ಸರ್ಕಾರವು ನಾಗಾಲ್ಯಾಂಡ್, ಮಣಿಪುರ, ಕಾಶ್ಮೀರ ಮತ್ತು ಛತ್ತೀಸ್ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳನ್ನು ಎದುರಿಸುತ್ತಿದೆ. ಈ ದಾಳಿಯೂ ಅದರ ಪರಿಣಾಮವಾಗಿಯೇ ನಡೆದಿರುವುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ. ಸರ್ಕಾರದ ಶೋಷಣೆಗೆ ಪ್ರತಿಕಾರವಾಗಿ ನಡೆದ ಈ ಕೃತ್ಯ ಎಂದು ಹೇಳುವ ಮೂಲಕ ತನ್ನ ಹೀನ ಕೃತ್ಯಕ್ಕೆ ತೇಪೆ ಹಚ್ಚುವ ಪ್ರಯತ್ನ ನಡೆಸಿದೆ.
ಭಾರತ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಪ್ರವಾಸಿಗರು ಸಾವನ್ನಪ್ಪಿರುವುದು ಆಘಾತ ತಂದಿದೆ. ಮೃತರ ಕುಟುಂಬಸ್ಥರಿಗೆ ನಾವು ಸಂತಾಪ ಸೂಚಿಸುತ್ತೇವೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ” ಎಂದು ಅವರು ಹೇಳಿದರು.
ಇನ್ನು ಉಗ್ರರ ಬಳಿಮಿಲಿಟರಿ ದರ್ಜೆಯ ಶಸ್ತ್ರಾಸ್ತ್ರಗಳು ಇತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇನ್ನು ದಾಳಿಯ ಹೊಣೆ ಹೊತ್ತುಕೊಂಡಿರುವ ಲಷ್ಕರ್-ಎ-ತೈಬಾದಂತಹ ಭಯೋತ್ಪಾದಕ ಗುಂಪುಗಳು ಪಾಕಿಸ್ತಾನದೊಳಗಿನಿಂದ ಹಣಕಾಸಿನ ನೆರವು, ತರಬೇತಿ ಮತ್ತು ಕಾರ್ಯತಂತ್ರದ ಬೆಂಬಲ ಪಾಕಿಸ್ತಾನದಿಂದ ಸಿಗುತ್ತಲೇ ಇವೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿರುವ ಶಿಬಿರಗಳು ಸುಧಾರಿತ ಮಿಲಿಟರಿ ತರಬೇತಿ ಮತ್ತು ವ್ಯವಸ್ಥಾಪನಾ ಬೆಂಬಲವನ್ನು ನೀಡುತ್ತವೆ.