ನವದೆಹಲಿ : ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಎಫ್-16 ಮತ್ತು ಜೆಎಫ್-17 ಯುದ್ಧ ವಿಮಾನಗಳನ್ನು ನಾಶ ಮಾಡಲಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ತಿಳಿಸಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಎಫ್-16 ಮತ್ತು ಜೆಎಫ್-17 ವರ್ಗದ ನಡುವಿನ 5 ಪಾಕಿಸ್ತಾನಿ ಹೈಟೆಕ್ ಯುದ್ಧವಿಮಾನಗಳನ್ನು ಹೊಡೆದು ಹಾಕಿದ್ದೇವೆ. 4 ಸ್ಥಳಗಳಲ್ಲಿದ್ದ ರಾಡಾರ್ಗಳು, 2 ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, 2 ರನ್ವೇಗಳು, 3 ಹ್ಯಾಂಗರ್ಗಳು ನಾಶಮಾಡಿದ್ದೇವೆ. ಈ ಹ್ಯಾಂಗರ್ನಲ್ಲಿದ್ದ ಎಫ್-16 ಮತ್ತು ಜೆಎಫ್-17 ವಿಮಾನಗಳು ನಾಶವಾಗಿದೆ” ಎಂದು ಮಾಹಿತಿ ನೀಡಿದರು.
“ಭಾರತೀಯ ಪಡೆಗಳು ಸುಮಾರು 300 ಕಿಲೋಮೀಟರ್ ದೂರದ ಗುರಿಗಳನ್ನು ಯಶಸ್ವಿಯಾಗಿ ಹೊಡೆದುರುಳಿಸುವ ಮೂಲಕ ಈ ಕಾರ್ಯಾಚರಣೆ ಇತಿಹಾಸ ನಿರ್ಮಿಸಿದೆ. ನಮ್ಮ ವಾಯುರಕ್ಷಣಾ ವ್ಯವಸ್ಥೆ ಎಸ್-400 ಉತ್ತಮ ಶಸ್ತ್ರಾಸ್ತ್ರ ವ್ಯವಸ್ಥೆ ಎನ್ನುವುದು ಸಾಬೀತಾಗಿದೆ. ಭಾರತಕ್ಕೆ ರಫೇಲ್ ಅಥವಾ ಸು-57 ವಿಮಾನಗಳು ಬೇಕಾಗಿವೆ ಮತ್ತು ಸರ್ಕಾರವು ಉತ್ತಮವಾದದ್ದನ್ನು ಖರೀದಿಸುತ್ತದೆ. ನಮಗೆ ಹೆಚ್ಚಿನ ಎಸ್-400ಗಳು ಬೇಕು. ಆದರೆ ಎಷ್ಟು ಎಂದು ನಾವು ಹೇಳುವುದಿಲ್ಲ” ಎಂದರು.
ಪಾಕಿಸ್ತಾನದ ಉಗ್ರರು ಬೇರೆ ಕಡೆ ಸ್ಥಳಾಂತರವಾಗುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ದೊಡ್ಡ ದೊಡ್ಡ ಶಿಬಿರಗಳಿಂದ ಈಗ ಸಣ್ಣ ಸಣ್ಣ ಶಿಬಿರಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ಇದರಿಂದಾಗಿ ಅವರನ್ನು ಗುರಿಯಾಗಿಸುವುದು ಕಷ್ಟವಾಗುತ್ತದೆ. ಆದರೆ ಅಗತ್ಯವಿದ್ದಾಗ ಆ ನೆಲೆಗಳ ಮೇಲೆ ಭಾರತ ದಾಳಿ ಮಾಡಬಹುದು” ಎಂದು ಹೇಳಿದರು.