ಬೆಂಗಳೂರು : ಕರ್ನಾಟಕದ ಚುನಾವಣಾ ಅಕ್ರಮದ ಬಗ್ಗೆ ರಾಹುಲ್ ಗಾಂಧಿ ಅವರು ಮೊದಲಿನಿಂದಲೂ ಹೇಳ್ತಿದ್ದಾರೆ. ಚುನಾವಣಾ ಆಯೋಗ ಅದನ್ನು ತಿರಸ್ಕರಿಸುತ್ತಿತ್ತು. ಈಗ ಅದರ ಬಗ್ಗೆ ಆಯೋಗ ಗಮನ ಹರಿಸಬೇಕು ಎಂದು ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕರ್ನಾಟಕದ ಒಂದು ಲೋಕಸಭಾ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂಬ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಅಕ್ರಮದ ಬಗ್ಗೆ ಬಹಿರಂಗಪಡಿಸಿದ ನಂತರ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ನಾವು ಸಹ ವೋಟರ್ ಲಿಸ್ಟ್‌ನಲ್ಲಿ ಏರುಪೇರಾಗಿದೆ ಅನ್ನೋದನ್ನ ಹೇಳ್ತಾನೆ ಬಂದಿದ್ದೇವೆ. ಚುನಾವಣಾ ಆಯೋಗವು ಇದನ್ನು ಸೀರಿಯಸ್ ಆಗಿ ಗಮನಹರಿಸಬೇಕು ಎಂದು ಹೇಳಿದರು.
ಆಂಧ್ರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆ ಪ್ರಕರಣ ಸಂಬಂಧ ಮಾತನಾಡಿದ ಅವರು, ಆಂಧ್ರ ಪ್ರದೇಶದ ಪೊಲೀಸರು ಈ ಬಗ್ಗೆ ತನಿಖೆ ಮಾಡ್ತಾರೆ. ಹತ್ಯೆಯಾದವರು ನಮ್ಮ ರಾಜ್ಯದವರಾಗಿರೋದ್ರಿಂದ ಆಂಧ್ರ ಪೊಲೀಸರು ಇಲ್ಲಿಗೂ ಬಂದು ತನಿಖೆ ಮಾಡ್ತಾರೆ. ನಮ್ಮ ಪೊಲೀಸರು ತನಿಖೆಯ ಫಾಲೋಅಪ್ ಮಾಡ್ತಾರೆ. ಆಂಧ್ರದಲ್ಲಿ ಹತ್ಯೆ ಆಗಿರುವ ಹಿನ್ನೆಲೆ ಆ ರಾಜ್ಯದವರೇ ತನಿಖೆ ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದರು.
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ನ್ಯಾ.ಕುನ್ಹಾ ವರದಿ ಮೇಲೆ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅವರು ಏನು ಶಿಫಾರಸ್ಸು ಕೊಟ್ಟಿದ್ದಾರೋ ಅದರಂತೆ ತೀರ್ಮಾನ ಮಾಡಲಾಗುವುದು. ಕ್ರಿಮಿನಲ್ ಪ್ರೊಸೀಜರ್ ಬಗ್ಗೆಯೂ ಶಿಫಾರಸ್ಸು ಮಾಡಿದ್ದಾರೆ. ಕುನ್ಹಾ ಅವರ ವರದಿಯಲ್ಲಿ ಕೊಹ್ಲಿ ಅವರ ಬಗ್ಗೆ ನಿರ್ದಿಷ್ಟವಾಗಿ ಪ್ರಸ್ತಾಪ ಇಲ್ಲ. ಯಾರ್ಯಾರು ಏನೇನು ಮಾಡಿದ್ದಾರೆ ಅನ್ನೋದು ಇದೆ. ಎಲ್ಲವನ್ನು ನೋಡಿ, ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.