ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆರೂ ವಿಷಯಗಳಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯ ಪೋಷಕರು ಮನೆಯಲ್ಲಿ ಕೇಕ್ ಕತ್ತರಿಸಿ ಆತನಿಗೆ ಆತ್ಮಸ್ಥೈರ್ಯ ತುಂಬಿದ ಅಪರೂಪದ ಘಟನೆ ನಡೆದಿದೆ.
ನವನಗರ ನಿವಾಸಿ ಯಲ್ಲಪ್ಪ ಚೋಳಚಗುಡ್ಡ ಅವರ ಪುತ್ರ ಅಭಿಷೇಕ 625 ಕ್ಕೆ 200 ಅಂಕ ಪಡೆದು ಅಷ್ಟೂ ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದಾನೆ. ಆತನ ಆತ್ಮಸ್ಥೈರ್ಯ ಕುಗ್ಗಬಾರದು ಎಂದು ಪಾಲಕರು ಕೇಕ್ ತಿನ್ನಿಸಿ ಆತನಿಗೆ ಧೈರ್ಯ ಹೇಳಿದ್ದಾರೆ.
ಅಭಿಷೇಕ ಚಿಕ್ಕವನಿದ್ದಾಗ ಎರಡು ಪಾದಗಳನ್ನು ಸುಟ್ಟುಕೊಂಡು ಗಾಯ ಮಾಡಿಕೊಂಡಾಗಿನಿಂದ ಆತನಿಗೆ ನೆನಪಿನ ಶಕ್ತಿ ಕಡಿಮೆ ಆಗಿದೆ ಈ ಹಿನ್ನೆಲೆಯಲ್ಲಿ ಆತ ಅನುತ್ತೀರ್ಣನಾಗಿ ಮಾನಸಿಕವಾಗಿ ಕುಗ್ಗಿದ್ದ. ಇದನ್ನು ಅರಿತ ಪಾಲಕರು ಸರಪ್ರೈಸ್ ಆಗಿ ಕೇಕ್ ತಂದು ಕತ್ತರಿಸಿ ತಿನ್ನಿಸಿದ್ದಾರೆ. ಆತ ಎಳ್ಳಷ್ಟೂ ಕುಗ್ಗದಂತೆ ಧೈರ್ಯ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ ನಾನೂ ಫೇಲ್ ಆದರೂ ತಂದೆ-ತಾಯಿ ಕೇಕ್ ತಿನ್ನಿಸಿ ಧೈರ್ಯ ತುಂಬಿದ್ದಾರೆ. ಇನ್ನೊಮ್ಮೆ ಪ್ರಯತ್ನಿಸಿ ಉತ್ತೀರ್ಣನಾಗುತ್ತೇನೆ ಎಂದು ತಿಳಿಸಿದ್ದಾರೆ.